ಕಲ್ಯಾಣ ಕರ್ನಾಟಕದ ಜನರ ಜೊತೆ ಇದ್ದೇನೆ: ಡಾ. ಅಜಯ್‍ಸಿಂಗ್
ಕಲಬುರಗಿ,ಜೂ 2:ಕಲಂ 371ನೇ ಜೇ ವಿರೋಧಿಸಿ ಬೆಂಗಳೂರು ಮೂಲದ ಕೆಲವು ಸಂಘಟನೆಗಳು, ಅಲ್ಲಿನ ಹಲವು ಬುದ್ದಿಜೀವಿಗಳು ಸೇರಿಕೊಂಡು ಕಲಂ 371 ಜೆ ಸಂವಿಧಾನದ ರಕ್ಷಣೆಯ ಕುರಿತಂತೆ ಅಪಪ್ರಚಾರದಲ್ಲಿ ತೊಡಗಿರುವದನ್ನು ಕಟುವಾಗಿ ಖಂಡಿಸಿರುವ ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಈ ವಿಚಾರದಲ್ಲಿ ತಾವು ಸದಾಕಾಲ ಕಲ್ಯಾಣದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮೂಲಕ ಜನರ ಜೊತೆಗೆ ಇರುವದಾಗಿ ಹೇಳಿದ್ದಾರೆ. ಹಸಿರು ಪ್ರತಿಷ್ಠಾನ ಸಂಘಟನೆಯ ಮೂಲಕ ಕೆಲವರು ಸೇರಿಕೊಂಡು ಇಂತಹ ಹೇಳಿಕೆ, ಹೋರಾಟಗಳ ಮೂಲಕ ಕಲ್ಯಾಣದ ಜನರ ಭಾವನೆಗಳನ್ನು ಕೆಣಕುವ ಪ್ರಯತ್ನ ಮಾಡಿರೋದು ಸರಿಯಲ್ಲ. ಹೀಗೆ ಮಾಡುವ ಮೊದಲು ಅವರು ಅಭಿವೃದ್ಧಿ ಹಾಗೂ ಪ್ರಾದೇಶಿಕ ಅಸಮಾನತೆ ವಿಚಾರದಲ್ಲಿ ಕಲ್ಯಾಣದ ಜಿಲ್ಲೆಗಳ ಜನ ಅನುಭವಿಸಿದ, ಇಂದಿಗೂ ಅನುಭವಿಸುತ್ತಿರುವ ನೋವು- ಯಾತನೆಅರಿಯಬೇಕಿತ್ತು ಎಂದಿದ್ದಾರೆ.
ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಜಾರಿಗೆ ಬಂದ ಕಲ್ಯಾಣ ಕರ್ನಾಟಕದ ಸಂವಿಧಾನದ 371ನೇ ಜೇ ಕಲಂ ನಮ್ಮ ಹಕ್ಕು. ಕಲ್ಯಾಣ ಕರ್ನಾಟಕಕ್ಕೆ ಜಾರಿಯಾಗಿರುವ ವಿಶೇಷ ಸ್ಥಾನಮಾನದಿಂದ ರಾಜ್ಯದ ಸರ್ಕಾರಿ ಸೇವೆಗಳಲ್ಲಿ ಹೆಚ್ಚಿನ ಪಾಲು ಕಲ್ಯಾಣ ಕರ್ನಾಟಕದರೆ ಪಡೆಯುತ್ತಿದ್ದಾರೆಂದು ಅಪಪ್ರಚಾರ ಮಾಡುತ್ತಿರೋದು ಸರಿಯಲ್ಲ.
ಈ ವಿಷಯವಾಗಿ ಕಲ್ಯಾಣದ ಜನರ ಕೂಗು, ಅಸಮಾಧಾನವನ್ನೆಲ್ಲ ತಾವೇ ಖುದ್ದಾಗಿ ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್ ಅವರ ಗಮನಕ್ಕೆ ತರುವದಾಗಿಯೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 1956 ರಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯ ನಿರ್ಲಕ್ಷ್ಯ ಮತ್ತು ಮಲತಾಯಿ ಧೋರಣೆ ಬೆಂಗಳೂರಿಗರಿಗೆ ಗೊತ್ತಿಲ್ಲವೆ? ನಿರಂತರ ಹೋರಾಟ ಮತ್ತು ರಾಜಕೀಯ ಇಚ್ಛಾಶಕ್ತಿಯಿಂದ ಪಡೆದ ಸಂವಿಧಾನದ 371ನೇ ಜೆ ಕಲಂ ಬಗ್ಗೆ ಅವರಿಗೇನು ಗೊತ್ತು. ನಮ್ಮ ನೋವು- ಯಾತನೆ ಸಹ ಗೊತ್ತಿಲ್ಲದಂತೆ ಅಪಪ್ರಾರಕ್ಕೆ ಮುಂದಾಗಿರೋದು ಸರಿಯಲ್ಲ ಎಂದೂ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅತ್ಯಂತ ಹಿಂದುಳಿದಿರುವ ಬಗ್ಗೆ ಸರಕಾರದ ಅಧಿಕೃತ ಸಂಸ್ಥೆಗಳಾದ ಸತ್ಯಶೋಧನಾ ಸಮಿತಿಯ ವರದಿ, ಧರಮಸಿಂಗ್ ಸಮಿತಿ ವರದಿ, ನಂಜುಂಡಪ್ಪ ವರದಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ನಾವು ವಿಶಾಲ ಕರ್ನಾಟಕದಲ್ಲಿ ಉದ್ಯೋಗದಿಂದ ವಂಚಿತರಾದಾಗ, ಶೈಕ್ಷಣಿಕ ಪ್ರವೇಶದಿಂದ ವಂಚಿತರಾದಾಗ, ಅಭಿವೃದ್ಧಿಯಿಂದ ವಂಚಿತರಾದಾಗ, ಕ್ಯಾರೆ ಎನ್ನದ ಸಂವಿಧಾನ ವಿರೋಧಿ ಶಕ್ತಿಗಳು ಇಂದು ನಮ್ಮ ಪಾಲಿನ ಹಕ್ಕು ನಾವು ಪಡೆಯುತ್ತಿರುವ ಕೆಲವು ಲಾಭಗಳನ್ನು ಆರಂಭಿಕ ಹಂತದಲ್ಲಿಯೇ 371ನೇ(ಜೆ) ಕಲಮಿಗೆ ವಿರೋಧಿಸುತ್ತಿರುವುದು ಸರಿಯಲ್ಲ, ಅವರು ತಮ್ಮ ನಿಲುವನ್ನು ಕೈಬಿಡಬೇಕು, ಹೋರಾಟಗಳಿಂದ ಹಿಂದೆ ಸರಿದು ಕಲ್ಯಾಣದ ಜನರ ಬವಣೆ, ಬೇಕು ಬೇಡಗಳಿಗೆ ಸ್ಪಂದಿಸಬೇಕು ಎಂದು ಡಾ. ಅಜಯ್ ಸಿಂಗ್ ಅವರು ಹಸಿರು ಪ್ರತಿಷ್ಠಾನ ಸಂಘಟನೆ ಹಾಗೂ ಅವರೊಂದಿಗೆ ಕೈ ಜೋಡಿಸಿರುವ ಎಲ್ಲರಿಗೂ ಕಿವಿಮಾತು ಹೇಳಿದ್ದಾರೆ.