ಬಸವಣ್ಣನವರ ವಿಶ್ವಪ್ರೇಮದ ತತ್ವಾದರ್ಶ ಇಂದಿಗೂ ಪ್ರಸ್ತುತ:ಸಂತೋಷ ಬಂಡೆ
ವಿಜಯಪುರ,ಜೂ.2: ಬಸವಣ್ಣನವರು ಪ್ರಚುರಪಡಿಸಿದ ಕಾಯಕ,
ದಾಸೋಹ, ಸಮಾನತೆ, ಅರಿವು, ಆಚಾರ ಎಂಬ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳುವ ಜತೆಗೆ ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ನಗರದ ವಜ್ರಹನುಮಾನ ಬಡಾವಣೆಯ
ಮಹಾಮನೆಯಲ್ಲಿ ಶನಿವಾರ ಸಂಜೆ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕøತಿಕ ವೇದಿಕೆ ವತಿಯಿಂದ ಹಮ್ಮಿಕೊಂಡ ‘ಹರ್ಡೇಕರ ಮಂಜಪ್ಪನವರ ಶ್ರೀ ಬಸವ ಚರಿತ್ರೆ ಪುಸ್ತಕ ಪರಿಚಯ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಮನುಷ್ಯರ ನಡುವೆ ಸೌಹಾರ್ದದ ಸೂತ್ರವೇ ಹರಿದು ಹೋಗಿ ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ದ್ವೀಪವಾಗಿರುವ ಈ ದಿನಗಳಲ್ಲಿ ಬಸವಣ್ಣನವರ ವಿಶ್ವಪ್ರೇಮದ ತತ್ವಾದರ್ಶ ಇಂದಿಗೂ ಪ್ರಸ್ತುತವೆನಿಸುತ್ತದೆ ಎಂದು ಹೇಳಿದರು.
ಹರ್ಡೇಕರ ಮಂಜಪ್ಪನವರು ಶ್ರೀ ಬಸವ ಚರಿತ್ರೆ ಕೃತಿಯಲ್ಲಿ ‘ಬಸವಣ್ಣನವರನ್ನು ಕೇಂದ್ರವಾಗಿರಿಸಿಕೊಂಡು, ಸಮಗ್ರ ಶರಣ ಯುಗದ ಅವಲೋಕನ ಮಾಡುವ ಜತೆಗೆ ಅವರ ಕೂಡಲಸಂಗಮ ಯಾತ್ರೆ, ಅಲ್ಲಿಂದ ಕಲ್ಯಾಣ, ಶರಣರೊಂದಿಗಿನ ಒಡನಾಟ, ವಚನ ರಚನೆ, ಸಾಮಾಜಿಕ ಸಮಾನತೆಗಾಗಿ ನಡೆದ ಹೋರಾಟ, ಮರಳಿ ಕೂಡಲಸಂಗಮನೆಡೆಗೆ ಬಂದುದರ’ ಕುರಿತಾಗಿ ವೈಚಾರಿಕ ಚಿತ್ರಣವನ್ನು ಓದುಗರಿಗೆ ನೀಡಿದ್ದು ಅಮೋಘವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಲ್ಹಾರದ ಸಂಗಮೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರಾಜಶೇಖರ ಉಮರಾಣಿ
ಮಾತನಾಡಿ, ಮನುಕುಲದ ಸರ್ವರಂಗದ ಸ್ವಾತಂತ್ರ್ಯಕ್ಕಾಗಿ, ಜನ ಮಾನಸದ ಏಳ್ಗೆಗಾಗಿ ಅವತರಿಸಿದ ಮನುಕುಲೋದ್ಧಾರಿ ಬಸವಣ್ಣನವರ ಅಪಾರ ಅಧ್ಯಯನ, ಆರ್ಥಿಕ ಸೂಕ್ಷ್ಮತೆ, ಆಡಳಿತ ಪ್ರಜ್ಞೆ, ಸಮಾಜ ಸಂವೇದನೆ, ಸಾಹಿತ್ಯ ಆಲೋಚನೆಗಳು ಇಂದಿನ ಜನಾಂಗಕ್ಕೆ ಹೆಚ್ಚು ಪ್ರಸ್ತುತವೆನಿಸಿವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಜಯಪುರ ಜಿಲ್ಲಾ ಉಪ್ಪಾರ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಪರಸಪ್ಪಗೋಳ ಮಾತನಾಡಿದರು.
ಓದುಗರ ಚಾವಡಿಯ ಅಧ್ಯಕ್ಷ ಬಿ ಆರ್ ಬನಸೋಡೆ, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಾ.ಎಂ ಎಸ್ ಮಾಗಣಗೇರಿ, ದಾಕ್ಷಾಯಿಣಿ ಬಿರಾದಾರ, ಮನು ಪತ್ತಾರ, ಶರಣು ಸಬರದ, ಆರ್.ಎಸ್. ಪಟ್ಟಣಶೆಟ್ಟಿ, ಶರಣಗೌಡ ಪಾಟೀಲ, ಸುಭಾಷ ಯಾದವಾಡ, ಸುಜಾತಾ ಚಲವಾದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸುಭಾಸ ಕನ್ನೂರ ಸ್ವಾಗತಿಸಿ ನಿರೂಪಿಸಿದರು. ಯು.ಎನ್. ಕುಂಟೋಜಿ ವಂದಿಸಿದರು.