ಕೇಂದ್ರ ರಾಜ್ಯ ಸರ್ಕಾರಗಳ ಉದ್ಯೋಗದ ಕಡೆ ಗಮನ ಹರಿಸಿ : ಮಲಗೌಡ ಜಾರೆ
ವಿಜಯಪುರ:ಜೂ.2: ಇಂಜನಿಯರಿಂಗ್ ಹಾಗೂ ತಾಂತ್ರಿಕ ಕ್ಷೇತ್ರದ ಪದವೀಧರರು ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಿ ಉದ್ಯೋಗಗಳನ್ನು ದೊರಕಿಸಿಕೊಳ್ಳಬೇಕೆಂದು ಕರ್ನಾಟಕ ರಾಜ್ಯ ಸರ್ಕಾರದ ಸಹಾಯಕ ಆಯುಕ್ತರಾಗಿ ನೇಮಕಗೊಂಡ ಸಿಕ್ಯಾಬ್ ಎಮ್‍ಬಿಎ ಕಾಲೇಜಿನ ಹಿಂದಿನ ವಿದ್ಯಾರ್ಥಿ ಮಲಗೌಡ ಶ್ರೀಮಂತಗೌಡ ಜಾರೆ ಅವರು ವಿದ್ಯಾರ್ಥಿ ಸಮೂಹಕ್ಕೆ ಕರೆ ನೀಡಿದರು.
ಅವರು ಸಿಕ್ಯಾಬ್ ಇಂಜನಿಯರಿಂಗ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ತಾವು ಕನ್ನಡ ಭಾಷೆಯಲ್ಲಿಯೇ ಬರೆದು ಮಾತೃಭಾಷೆಯನ್ನು ಸಮರ್ಥವಾಗಿ ಬಳಸಿಕೊಂಡು ಗುರಿಸಾಧಿಸಿದ್ದಾಗಿ ತಮ್ಮ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸುಮಾರು 22 ಸಂದರ್ಶನಗಳನ್ನು ಎದುರಿಸಿದ ನಂತರ ಈ ಮಟ್ಟದ ಸಾಧನೆ ಸಾಧ್ಯವಾಯಿತು ಎಂದು ತಿಳಿಸಿದರು. ವಿದ್ಯಾರ್ಥಿಗಳು ಛಲ ಬಿಡದೆ ಪರಿಶ್ರಮ ವಹಿಸಿ ಗುರಿತಲುಪಬೇಕೆಂದು ಆಶಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಕರ್ನಾಟಕ ಸಹಕಾರಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಮಲ್ಲಿಕಾರ್ಜುನ ಲೋಣಿ ಮಾತನಾಡಿ ವಿದ್ಯಾರ್ಥಿಗಳು ಚಂಚಲತೆಯನ್ನು ತೊರೆದು ಏಕಾಗ್ರತೆಯಿಂದ ಶ್ರಮಿಸಿದರೆ ಸಂಕಲ್ಪ ಸಿದ್ಧಿಯಾಗುತ್ತದೆ ಎಂದು ನುಡಿದರು ಸಿಕ್ಯಾಬ ಸಂಸ್ಥೆಯನ್ನು ಸ್ಥಾಪಿಸಿ ದೂರದೃಷ್ಟಿ ಹೊಂದಿದ ಎಸ್.ಎ. ಪುಣೇಕರ ಅವರ ಶ್ರಮವನ್ನು ಶ್ಲಾಘಿಸಿ ಬಡವರು, ಅಲ್ಪಸಂಖ್ಯಾತರ ಹಾಗೂ ಸಮಾಜದ ಕೆಳವರ್ಗಗಳ ಮಕ್ಕಳ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಸಿಕ್ಯಾಬ ನಡೆದ ದಾರಿಯನ್ನು ಗತಾವಲೋಕನ ಮಾಡಿದರು.
ಸಿಕ್ಯಾಬ ಸಂಸ್ಥೆಯ ನಿರ್ದೇಶಕರಾದ ಸಲಾವುದ್ದೀನ ಪುಣೇಕರ ಮಾತನಾಡಿ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾದ ಕನ್ನಡ ಕಲಿಕೆಯ ಮಹತ್ವ ಅರಿಯಲು ಸೂಚಿಸಿದರು. ಸಿಕ್ಯಾಬ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್.ಎ. ಪುಣೇಕರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪವಿತ್ರ ಖುರಾನ, ಬಸವಣ್ಣನವರ ವಚನ ಹಾಗೂ ಗೀತಾ ಪಠಣದೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಪ್ರೊ. ತಬಸ್ಸುಮ್ ಗುಳೇದಗುಡ್ಡ ಸರ್ವರನ್ನು ಸ್ವಾಗತಿಸಿದರು. ಡಾ. ಎಸ್.ಎ. ಖಾದ್ರಿ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಸಯ್ಯದ ಅಬ್ಬಾಸ ಅಲಿ ವಾರ್ಷಿಕ ವರದಿ ಪ್ರಸ್ತುತ ಪಡಿಸಿದರು. ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಪ್ರೊ. ಆಸೀಫ ದೊಡಮನಿ, ಪ್ರೊ. ಸುಹೇಬ್, ಪ್ರೊ. ಅಲ್ತಾಫ ಬಾಗವಾನ ನೆರವೇರಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಎ.ಎಸ್. ಪಾಟೀಲ, ನಜೀಬ್ ಭಕ್ಷಿ, ಹಿರಿಯ ಪತ್ರಕರ್ತ ರಫಿ ಭಂಡಾರಿ, ಸೈಯದ ಹೈದರಪಾಶಾ, ಸಲೀಮ ಜಹಾಗೀರದಾರ, ನ್ಯಾಯವಾದಿ ನಾಗರಾಜ ಲಂಬು, ನಿಂಗಪ್ಪ ಕೊಂಡಗೂಳಿ ಮುಂತಾದವರು ಉಪಸ್ಥಿತರಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪಿ.ಎಚ್.ಡಿ ಪದವಿ ಪಡೆದ ಪ್ರಾಧ್ಯಾಪಕರಾದ ಪ್ರೊ. ಅಬ್ಬಾಸ ಅಲಿ ಧುಂಡಸಿ, ಪ್ರೊ. ಸಭಾ ಫಾತಿಮಾ, ಪ್ರೊ. ಅಸ್ಲಮ ಕರಜಗಿ ಪ್ರೊ. ಚೇತನ ಮರೋಳ, ಖಲೀಲ್ ಅಹ್ಮದ್ ದಿಲಶಾದ್ ಇವರನ್ನು ಸನ್ಮಾನಿಸಿಲಾಯಿತು. ಪ್ರೊ. ನಜೀರಾ ಮದಭಾವಿ ಪ್ರೊ. ಐಶ್ವರ್ಯ ಕಮತಗಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಗೆ ನೆರವೇರಿಸಿದರು.