ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮ
ಯಾದಗಿರಿ : ಜೂ.02: ಯುವಕರು ಉತ್ತಮ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮರಿಯಪ್ಪ ಅವರು ಅಭಿಪ್ರಾಯಪಟ್ಟರು.
ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆ ಹೆಚ್ಚಾಗಿ ತಂಬಾಕು ಸೇವನೆಯ ಚಟಕ್ಕೆ ತುತ್ತಾಗುತ್ತಿದ್ದು, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಯವಕರು ಅರಿತುಕೊಳ್ಳಬೇಕು ಎಂದು ನುಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಎಂ.ಎಸ್ ಪಾಟೀಲ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಗ್ಯಾಂಗ್ರೀನ್, ಬಿಪಿ, ಶುಗರ್, ಟಿಬಿ, ತಲೆಕೂದಲು ಉದುರುವಿಕೆ, ಅವಧಿ ಪೂರ್ವ ಮಗುವಿನ ಜನನ ಮುಂತಾದ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಡಿಯಲ್ಲಿ ಇರುವ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಮತ್ತು ನಿಕೋಟಿನ್ ಮಾತ್ರೆಗಳನ್ನು ಉಚಿತವಾಗಿ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಧೀಶರಾದ ಅರುಣ ಚೌಗುಲೆ, ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ರಾಹುಲ್ ಚಾಂಬರ್, ವಕೀಲರ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್ ಮಾಲಿಪಾಟೀಲ್, ಕಾರ್ಯದರ್ಶಿ ಶಾಂತಪ್ಪ ಜಾಧವ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಡಾ.ಪ್ರಭುಲಿಂಗ ಮಾನಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.