ಹೈನುಗಾರಿಕೆಯಿಂದ ಸ್ವಾವಲಂಬನೆ ಸಾಧ್ಯ
ಕಲಬುರಗಿ:ಜೂ.01: ರೈತರು ಸಂಪೂರ್ಣವಾಗಿ ಕೃಷಿಯನ್ನೇ ಅವಲಂಬಿಸಿದರೆ ಪ್ರಕೃತಿ ಏರಿಳತಗಳಿಂದ ನಿರಿಕ್ಷಿತ ಫಸಲು ಪಡೆಯದೆ ನಷ್ಟವಾಗುತ್ತದೆ. ಕೃಷಿ ಜೊತೆಗೆ ಪೂರಕ ಕಸಬಾದ ಹೈನುಗಾರಿಕೆಯು ನಷ್ಟದ ಸಂದರ್ಭದಲ್ಲಿ ಸಹಾಯವಾಗುತ್ತದೆ. ಹೈನುಗಾರಿಕೆಯಿಂದ ಆರ್ಥಿಕ ಸ್ಥಿತಿ ಉತ್ತಮವಾಗಿ, ಸ್ವಾವಲಂಬನೆಯುತ ಜೀವನ ಸಾಗಿಸಲು ಸಾಧ್ಯವಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ನಗರದ ಶಿವ ನಗರದಲ್ಲಿರುವ ‘ಜ್ಞಾನ ಚಿಗುರು ಟ್ಯುಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶನಿವಾರ ಜರುಗಿದ ‘ವಿಶ್ವ ಕ್ಷೀರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಡಾ.ವರ್ಗಿಸ್ ಕುರಿಯನ್ ಅವರನ್ನು ‘ಶ್ವೇತ ಕ್ರಾಂತಿಯ ಪಿತಾಮಹ’ ಎಂದು ಕರೆಯಲಾಗುತ್ತದೆ. ಹಾಲು ಅಮೃತಕ್ಕೆ ಸಮಾನ. ಎಲ್ಲಾ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವಾಗಿದೆ. ವಿಶ್ವದಲ್ಲಿ ಇಂದಿಗೂ ಕೂಡಾ ಅನೇಕ ಮಕ್ಕಳು ಹಾಲಿನ ಲಭ್ಯತೆಯಿಂದ ವಂಚಿತರಾಗಿ ಅಪೌಷ್ಟಿಕತೆಯನ್ನು ಎದುರಿಸುತ್ತಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಗೆ ಆದ್ಯತೆಯನ್ನು ನೀಡಿ ಹಾಲಿನ ಉತ್ಪಾದಕತೆಯನ್ನು ವೃದ್ಧಿಗೊಳಿಸುವದರ ಜೊತೆಗೆ, ಅದನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಎಲ್ಲರಿಗೂ ದೊರೆಯುವಂತೆ ಮಾಡುವುದು ಅಗತ್ಯವಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಅಮರ ಜಿ.ಬಂಗರಗಿ, ಮಹೇಶ ಬಿರಾಜಾದಾರ, ರಾಹುಲ ಪಾಟೀಲ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.