ಒಂದು ಮತದಿಂದಲಾದರೂ ಗೆಲ್ಲುವೆ: ಜಿಗಜಿಣಗಿ ವಿಶ್ವಾಸ
ವಿಜಯಪುರ,ಜೂ.1: ಈ ಬಾರಿ ಚುನಾವಣೆಯಲ್ಲಿ ಕನಿಷ್ಠ ಒಂದು ಮತದಿಂದಲಾದರೂ ಗೆದ್ದೇ ಗೆಲ್ಲುವೆ ಎಂದು ಸಂಸದ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಈ ಸಲ ವಿಜಯಪುರದಲ್ಲಿ ಒನ್ ಸೈಡೆಡ್ ಚುನಾವಣೆ ನಡೆದಿದೆ. ಈ ಬಾರಿ ನಾನು ಕನಿಷ್ಠ ಒಂದು ಮತದ ಅಂತರದಿಂದ ಗೆಲುವು ಸಾಧಿಸುತ್ತೇನೆ. ಯಾರಿಗೂ ಸಂಶಯ ಬೇಡ ಎಂದರು.
ನಾನು ಇಡೀ ಮತಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡಿದ್ದೇನೆ. ಅದರಲ್ಲೂ ಮಹಿಳೆಯರು ಈ ಹಿಂದೆ ರೂ. 2000 ನೀಡುವುದಾಗಿ ಹೇಳಿದ್ದಕ್ಕೆ ಸಿದ್ಧರಾಮಯ್ಯ ಅವರಿಗೆ ಮತಹಾಕಿ ಗೆಲ್ಲಿಸಿದ್ದೇವೆ. ಈಗ ಅವರದು ಮುಗಿದಿದೆ. ಈಗ ಲೋಕಸಭೆ ಚುನಾವಣೆಯಲ್ಲಿ ಬಡವರಿಗೆ, ರೈತರಿಗೆ, ಮಹಿಳೆಯರಿಗೆ ಸೇರಿದಂತೆ ನಮಗೆಲ್ಲರಿಗೂ ಅನುಕೂಲ ಮಾಡಿಕೊಟ್ಟಿರುವ ಮೋದಿ ಸಾಹೇಬರಿಗೆ ಬಿಟ್ಟು ಇನ್ಯಾರಿಗೆ ವೋಟು ಹಾಕೋಣ ಎಂದು ಹೇಳಿದ್ದಾರೆ. ಈ ಬಾರಿ ಚುನಾವಣೆ ಬಹಳ ಚೆನ್ನಾಗಿ ಆಗಿರುವುದು ನನ್ನ ಅದೃಷ್ಟ. ನಾನು ಎದುರಿಸಿದ 13 ಚುನಾವಣೆಗಳಲ್ಲಿಯೇ ಈ ಬಾರಿಯ ಚುನಾವಣೆ ಅತ್ಯಂತ ಒಳ್ಳೆಯ ಮತ್ತು ಸಮಾಧಾನ ತಂದಿದೆ ಎಂದು ಹೇಳಿದರು.
ಈ ಚುನಾವಣೆ ಬಳಿಕ ರಾಜ್ಯ ಸರಕಾರ ತನ್ನಿಂದ ತಾನೇ ಪತನವಾಗಲಿದೆ. ನಾವು ಯಾರೂ ಏನೂ ಮಾಡುವುದಿಲ್ಲ. ಅದು ತಾನಾಗಿಯೇ ಬೀಳುತ್ತದೆ ಎಂದು ಅವರು ಭವಿಷ್ಯ ನುಡಿದರು.
ಇದೇ ವೇಳೆ ಕೇಂದ್ರದಲ್ಲಿ ಸಚಿವರಾಗುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ವಯಸ್ಸಿಗೆ ತಕ್ಕ ಖಾತೆ ನೀಡಿದರೆ ಸಚಿವನಾಗುತ್ತೇನೆ. ಈ ಮುಂಚೆ ನನ್ನ ಮೇಲೆ ವಿಶ್ವಾಸವಿಟ್ಟು ಕೇಂದ್ರದಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು. ನಾನೂ ಕೂಡ ಅಷ್ಟೇ ಶ್ರದ್ಧೆಯಿಂದ ಪ್ರಾಮಾಣಿಕವಾಗಿ ದೇಶದ ಜನರಿಗೆ ಕುಡಿಯುವ ನೀರು ಒದಗಿಸಲು ಪ್ರಯಾಸ ಮಾಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಆಗಿರುವ ಯೋಜನೆಗಳು ತಮಗೆಲ್ಲರಿಗೂ ಗೊತ್ತಿದೆ. ಮುಂದೆ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡುವ ಕುರಿತು ಹೈಕಮಾಂಡ್ ನಿರ್ಧರಿಸುತ್ತದೆ. ನನ್ನ ಜೀವನದಲ್ಲಿ ಯಾವತ್ತೂ ಅಧಿಕಾರಕ್ಕಾಗಿ ರಾಜಕಾರಣ ಮಾಡಿಲ್ಲ. ಒಬ್ಬ ವ್ಯಕ್ತಿಯ ಸಲುವಾಗಿ ಅಧಿಕಾರ ಬಿಟ್ಟಿದ್ದೇನೆ. ಕಂದಾಯ ಸಚಿವ ಸ್ಥಾನವನ್ನು ಬೇರೊಬ್ಬರ ಸಲುವಾಗಿ ತ್ಯಾಗ ಮಾಡಿದ್ದೇನೆ. ಆಯ್ಕೆಯಾದ ನಂತರ ನಾನು ಸಚಿವ ಸ್ಥಾನ ಕೊಡಿ ಎಂದು ಯಾರನ್ನೂ ಕೇಳುವುದಿಲ್ಲ. ಅವರಾಗಿಯೇ ನೀಡಿದರೆ ಮಂತ್ರಿಯಾಗುತ್ತೇನೆ. ನನ್ನ ವಯಸ್ಸಿಗೆ ತಕ್ಕ ಖಾತೆ ನೀಡಿದರೆ ಸಚಿವನಾಗುತ್ತೇನೆ. ಕೇಂದ್ರ ಸಚಿವರಿಗಿಂತಲೂ ಹೆಚ್ಚಿನ ಕೆಲಸವನ್ನು ಜಿಲ್ಲೆಯಲ್ಲಿ ಮಾಡಿದ್ದೇನೆ. ಮುಂದೆಯೂ ಮಾಡಿ ತೋರಿಸುತ್ತೇನೆ ಎಂದು ಅವರು ಹೇಳಿದರು.
ಇದೇ ವೇಳೆ, ನಾನು ಕಳೆದ 45 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದೇನೆ. ಆದರೆ, ನನ್ನ ಪಕ್ಷದವರು ನನ್ನ ಅನುಭವವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡಿಲ್ಲ. ನಾನು ಸುಮಾರು 45 ವರ್ಷ ರಾಜಕಾರಣದಲ್ಲಿ 20 ವರ್ಷ ಸಚಿವನಾಗಿದ್ದೇನೆ. ನನ್ನಷ್ಟು ಹಿರಿಯರು ಪಕ್ಷದಲ್ಲಿ ಯಾರೂ ಇಲ್ಲ. ನನ್ನ ಅನುಭವಗಳನ್ನು ಹಂಚಿಕೊಳ್ಳಲಿಲ್ಲ ಎಂಬ ನೋವು ನನಗಿದೆ. ನನ್ನ ಸಲುವಾಗಿ ಅಲ್ಲ, ಪಕ್ಷದ ಸಲುವಾಗಿ ನನ್ನ ಅನುಭವ ಪಡೆಯಬೇಕಿತ್ತು. ನಾನು ಎಲ್ಲ ತ್ಯಾಗ ಮಾಡಿದ್ದೇನೆ. ಜೀವನದಲ್ಲಿ ಹಣದ ಹಿಂದೆ ಬಿದ್ದಿಲ್ಲ. ಅಧಿಕಾರದ ಹಿಂದೆ ಬಿದ್ದಿಲ್ಲ. ಇರುವುದನ್ನು ಬಿಟ್ಟಿದ್ದೇನೆ. ನನ್ನ ವಯಸ್ಸಿಗೆ ತಕ್ಕ ಹುದ್ದೆ ನೀಡಿದರೆ ನೀಡಲಿ. ಕೊಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ನುಡಿದರು.
ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರುವುದಿಲ್ಲ
ಈ ಬಾರಿ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಪ್ರಭಾವ ಬೀರಿಲ್ಲ. ಎಲ್ಲ ಮಹಿಳೆಯರಿಗೆ ಹಣ ನೀಡುವುದಾಗಿ ಹೇಳಿ ಈಗ ಕೇವಲ ಒಬ್ಬರಿಗೆ ಮಾತ್ರ ನೀಡಿ ಮನೆಯಲ್ಲಿಯೇ ಮಹಿಳೆಯರು ಜಗಳವಾಡುವಂತೆ ಮಾಡಿದ್ದಾರೆ. ಅತ್ತೆ-ಸೊಸೆ ಮಧ್ಯೆ ಜಗಳ ಹಚ್ಚಿದ್ದಾರೆ. ಇವರು ಮಾತ್ರ ರೂ. 2000 ಕೊಟ್ಟಿದ್ದಾರಾ? ಮೋದಿಯವರು ಏನೂ ಕೊಟ್ಟಿಲ್ಲವೇ? ಮೋದಿ ಅವರು ಮಾಡಿದಷ್ಟು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಾಡಿದ್ದಾರಾ? ಆದರೆ, ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಜಗತ್ತಿಗೆ ಮೋದಿಯೆ ಗ್ಯಾರಂಟಿಯಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಜ್ವಲ ರೇವಣ್ಣ ಪ್ರಕರಣದಿಂದ ಮೈತ್ರಿಗೆ ಯಾವುದೇ ಡ್ಯಾಮೇಜ್ ಆಗುವುದಿಲ್ಲ. ತನಿಖೆ ಸಂಪೂರ್ಣವಾದ ನಂತರ ಇದರ ಹಿಂದೆ ಯಾರು ಇದ್ದಾರೆ ಎಂಬುದು ಇಡೀ ದೇಶಕ್ಕೆ ಗೊತ್ತಾಗಲಿದೆ. ಇದರ ಪರಿಣಾಮ ಚುನಾವಣೆ ಮೇಲೆ ಆಗಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದ ಹಗರಣದಲ್ಲಿ ಬಡ ಸಮಾಜದ ಹಣ ತಿಂದಿದ್ದಾರೆ. ಹೀಗಾಗಿ ಆ ಸಚಿವರು ರಾಜೀನಾಮೆ ಕೊಡಲೇಬೇಕು ಎಂದು ಅವರು ಆಗ್ರಹಿಸಿದರು.
ಈ ಬಾರಿ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಅಧಿಕಾರಿಗಳೂ ಸಮರ್ಪಕವಾಗಿ ಚುನಾವಣೆ ನಡೆಸಿಕೊಟ್ಟಿರುವುದಕ್ಕೆ ಅವರು ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು.