ಕೇಂದ್ರದಿಂದ ರಾಜ್ಯಕ್ಕೆ ಬೇಡಿಕೆಯಷ್ಟು ಗೊಬ್ಬರ ಸರಬರಾಜು:ಭಗವಂತ ಖೂಬಾ
ಬೀದರ,ಜೂ 1:ಮುಂಗಾರು ಹಂಗಾಮು ಪ್ರಾರಂಭಕ್ಕೂ ಮುನ್ನವೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ, ರಾಜ್ಯ ಸರ್ಕಾರ ಸಲ್ಲಿಸಿರುವ ಬೇಡಿಕೆಯಷ್ಟು ಗೊಬ್ಬರವನ್ನು ಸರಬರಾಜು ಮಾಡಲಾಗಿದೆ, ಅದನ್ನು ರೈತರಿಗೆ ತಲುಪಿಸುವ ಜವಬ್ದಾರಿ ರಾಜ್ಯ ಸರ್ಕಾರದ್ದಿದೆ. ಆದ್ದರಿಂದ ಪ್ರತಿಯೊಂದಕ್ಕು ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡದೆ, ತಮ್ಮ ಜವಬ್ದಾರಿಯನ್ನು ಪ್ರಾಮಾಣಿಕತೆಯಿಂದ ರಾಜ್ಯದ ಮುಖ್ಯಮಂತ್ರಿಗಳು, ಕೃಷಿ ಸಚಿವರು ಮತ್ತು ಆಯಾ ಜಿಲ್ಲಾ ಉಸ್ತುವಾರಿ ಮಂತ್ರಿಗಳು ನಿಭಾಯಿಸಬೇಕೆಂದು ಕೇಂದ್ರ ರಸಾಯನಿಕ, ರಸಗೊಬ್ಬರ ಖಾತೆಗಳ ರಾಜ್ಯ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಬೀದರ ಜಿಲ್ಲೆಯಲ್ಲೂ ಕೃಷಿ ಇಲಾಖೆ ಸಲ್ಲಿಸಿರುವ ಬೇಡಿಕೆಯ ಅನುಗುಣವಾಗಿ ಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ, ಆದರೆ ಪ್ರತಿ ವರ್ಷದಂತೆ ಡಿ.ಸಿ.ಸಿ. ಬ್ಯಾಂಕನವರು ಡಿಮಾಂಡ ಸಲ್ಲಿಸಿ, ತಮ್ಮ ತಮ್ಮ ಪಿ.ಕೆ.ಪಿ.ಎಸ್ ಬ್ಯಾಂಕ್‍ಗಳಿಗೆ ಗೊಬ್ಬರ ತೆಗೆದುಕೊಂಡು ಹೊಗಬೇಕಾಗಿರುತ್ತದೆ, ಆದರೆ ಇನ್ನು ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ನಿದ್ದೆಯಿಂದ ಹೊರಬಂದಂತೆ ಕಾಣ್ತಾಯಿಲ್ಲ. ಇಲ್ಲಿಯವರೆಗೆ ಎಷ್ಟೋ ಕಡೆ ಗೊಬ್ಬರ ತೆಗೆದುಕೊಂಡು ಹೋಗುವ ಕೆಲಸವೆ ಮಾಡಿಲ್ಲ. ಆದ್ದರಿಂದ ಕೂಡಲೆ ಡಿ.ಸಿ.ಸಿ ಬ್ಯಾಂಕನವರು ಕಾರ್ಯೋನ್ಮುಖರಾಗಬೇಕೆಂದು ತಿಳಿಸಿದ್ದಾರೆ, ರೈತರ ಮನೆ ಬಾಗಿಲಿಗೆ ಗೊಬ್ಬರ ತಲುಪಿಸುವ ಜವಬ್ದಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯದ್ದಾಗಿದೆ, ಅವರು ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಬೇಕೆಂದು ಕೇಂದ್ರ ಸಚಿವ ಭಗವಂತ ಖೂಬಾ ಕಿವಿ ಮಾತು ಹೇಳಿದ್ದಾರೆ.
ಗೊಬ್ಬರ ಅಭಾವ ಸೃಷ್ಟಿ ಮಾಡುವುದು, ನಕಲಿ ಗೊಬ್ಬರ ಉತ್ಪಾದನೆಯಂತಹ ಕ್ರಿಮಿನಲ್ ಕೆಲಸಗಳು ನಡೆಯುತ್ತವೆ, ಅಂತವರ ಮೇಲೂ ಜಿಲ್ಲಾಡಳಿತ ಹದ್ದಿನ ಕಣ್ಣಿಡಬೇಕು, ಸಬ್ಸಿಡಿಯಲ್ಲಿ ಕೇಂದ್ರ ಸರ್ಕಾರ ನೀಡುತ್ತಿರುವ ಗೊಬ್ಬರ ಪ್ರತಿಯೊಬ್ಬ ರೈತನಿಗೂ ತಲುಪಿಸುವ ಕೆಲಸವಾಗಬೇಕೆಂದು ತಿಳಿಸಿದ್ದಾರೆ. ರೈತ ವಿರೋಧಿ ಕಾಂಗ್ರೇಸ್ ಸರ್ಕಾರ ಬಿತ್ತನೆ ಬೀಜಗಳ ಬೆಲೆ ಹೆಚ್ಚಳ ಮಾಡಿ, ಗಾಯದ ಮೇಲೆ ಬರೆ ಏಳೆಯುವ ಕೆಲಸ ಮಾಡಿರುವುದು ತಪ್ಪು.ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು ಎಂದು ಜಿಲ್ಲಾಡಳಿತಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ ಸಲಹೆ ನೀಡಿದ್ದಾರೆ.