ಭೂಮಾಪಿಯಾ ಪ್ರಕರಣ ಸಿಒಡಿ ತನಿಖೆಗೆ ವಹಿಸಿ: ಸಿಎಂಗೆ ಪಟ್ಟಣಶೆಟ್ಟಿ ಮನವಿ ಸಲ್ಲಿಕೆ
ವಿಜಯಪುರ, ಜೂ.1:ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ನಕಲಿ ಭೂ ದಾಖಲೆ ಸೃಷ್ಟಿಸಿ ಜನರನ್ನು ವಂಚಿಸುತ್ತಿರುವ ಭೂಮಾಫಿಯಾ ಮಟ್ಟ ಹಾಕಲು ಈ ಪ್ರಕರಣದ ಸಮಗ್ರ ತನಿಖೆಯನ್ನು ಸಿ.ಓ.ಡಿಗೆ ವಹಿಸುವಂತೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಭೂ ಅಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಸುದೀರ್ಘವಾಗಿ ವಿವರಿಸಿದರು.
ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಭೂದಾಖಲೆ ಸೃಷ್ಟಿಸಿ ಜಿಲ್ಲೆಯಲ್ಲಿ ಭೂಮಿ ಮತ್ತು ನಿವೇಶನ ಮಾರಾಟ ಮಾಡಿರುವ ನೂರಾರು ಪ್ರಕರಣಗಳು ನಡೆದಿದ್ದು ಕೆಲವೊಂದು ಪ್ರಕರಣಗಳು ಮಾತ್ರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇನ್ನೂ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಇಂತಹ ಪ್ರಕರಣಗಳಿಗೆ ನೂರಾರು ಜನ ತಮ್ಮ ಜಮೀನು ಮತ್ತು ನಿವೇಶನಗಳು ಕಳೆದುಕೊಂಡಿದ್ದಾರೆ, ಖೋಟ್ಟಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣಗಳು ನನ್ನ ಗಮನಕ್ಕೆ ನಾನು ಹಲವಾರು ಬಾರಿ ಪತ್ರಿಕಾಗೋಷ್ಠಿ ಮುಖಾಂತರ ಹಾಗೂ ನಾನು ಪ್ರತ್ಯಕ್ಷವಾಗಿ ಹಿಂದಿನ ಸರ್ಕಾರದ ಗಮನಕ್ಕೂ ತಂದರೂ ಕೂಡಾ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎಂದರು.
ಈ ಜಾಲ ವ್ಯವಸ್ಥಿತವಾಗಿ ವ್ಯಾಪಿಸಿರುವುದರಿಂದ ಸಿ.ಒ.ಡಿ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿದರು.
ಈ ಪ್ರಕರಣದಲ್ಲಿ ಭೂಮಿ ಹಾಗೂ ನಿವೇಶನಗಳನ್ನು ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ಮೂಲ ಮಾಲಿಕರಿಗೆ ಅವರ ಜಮೀನು ಹಾಗೂ ನಿವೇಶನಗಳನ್ನು ಹಿಂದಿರುಗಿಸಬೇಕಾಗಿ ವಿನಂತಿಸಿಕೊಂಡರು. ಈ ಸಂದರ್ಭದಲ್ಲಿ ಜಗದೀಶ ಮುಚ್ಚಂಡಿ ಇದ್ದರು.