ಬಿತ್ತನೆ ಬೀಜ ದರ ಏರಿಕೆ ಖಂಡಿಸಿ ಪ್ರತಿಭಟನೆ
ಕಾಳಗಿ.ಜೂ.1 : ರಾಜ್ಯದ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜಗಳ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆಯಲ್ಲಿ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಲ್ಲಿನಾಥ ಪಾಟೀಲ ಮಾತನಾಡಿ ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ಬಸವಳಿದು ತತ್ತರಿಸಿ ಕಂಗಾಲಾಗಿ ಹೋಗಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಬಿರು ಬಿಸಿಲಿನ ಝಳಕ್ಕೆ ಒಣಗಿ ನಾಶವಾಗಿವೆ. ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ. ಇಂತಹ ಶೋಚನೀಯ ಸ್ಥಿತಿಯಲ್ಲಿದ್ದ ರೈತ ಮುಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಿಂದ ಮತ್ತು ಬಂದ ವರುಣದಿಂದ ಹರ್ಷಿತನಾಗಿ ಬೀಳು ಬಿದ್ದು ಜಮೀನು ಉಳಿಮೆ ಮಾಡಿ, ಹಸನು ಮಾಡಿಕೊಂಡಿದ್ದಾನೆ.ಆದರೆ ಬಿತ್ತನೆ ಬೀಜಕ್ಕಾಗಿ ಬಂದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜಗಳ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿಯೂ ದರ ಭಾರಿ ಹೆಚ್ಚಳವಾಗಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿದೆ. ಬೆಲೆ ಏರಿಸುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಗೊತ್ತಾಗದಂತೆ ರೈತನ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿದೆ. ಇದು ಕಿಡಿಗೇಡಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಸಹಾಯಧನ ಹೆಚ್ಚಿಸಿ ಬಿತ್ತನೆ ಬೀಜಗಳು ಕಡಿಮೆ ದರದಲ್ಲಿ ವಿತರಣೆ ಮಾಡಿ, ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ಬಸವಳಿದ ರೈತರಿಗೆ ಅನುಕೂಲ ಮಾಡಿಕೊಡಬೇಕು.ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ವಹಿಸಬೇಕು. ನಕಲಿ ಬೀಜಗಳ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು.
ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ವಹಿಸಬೇಕು.ಬರ ಪರಿಹಾರ ಸರಿಯಾಗಿ ವಿತರಣೆಯಾಗಿಲ್ಲ. ಈ ಬಗ್ಗೆ ಗಮನವಹಿಸಿ ಬರ ಪರಿಹಾರ ಸರಿಯಾದ ರೀತಿಯಲ್ಲಿ ವಿತರಣೆ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಹಿಂದೂ ಜಾಗೃತಿ ಸೇನೆ ತಾಲೂಕು ಅಧ್ಯಕ್ಷ ಶಂಕರ ಚೋಕಾ, ರಾಜಶೇಖರ ಗುಡದ, ಬಸವರಾಜ ತಳವಾರ, ನಾಗರಾಜ ಕೇಶ್ವರ್, ಶರಣು ಸೀಗಿ, ಬಲರಾಮ ವಲ್ಲ್ಯಾಪುರ, ಸುಂದರ್ ಸಾಗರ, ವಿರೇಶ ಬೇಡಸೂರ, ವಿಜಯಕುಮಾರ ತುಪ್ಪದ, ಮೋಹನ ಚಿನ್ನ, ಜಗನ್ನಾಥ ತೇಲಿ ಸೇರಿದಂತೆ ಅನೇಕರಿದ್ದರು.