ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ಹೊಸ ಕೋರ್ಸ್
ಬೀದರ್:ಜೂ.1: ನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ಹೊಸ ಕೋರ್ಸಗಳ ಆರಂಭಕ್ಕೆ ಅನುಮತಿ ದೊರೆತಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಯಿಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ಹಾಗೂ ಸಿವಿಲ್ ಎಂಜಿನಿಯರಿಂಗ್ ಕೋರ್ಸಗಳನ್ನು ಶುರು ಮಾಡಲು ನವದೆಹಲಿಯ ಎಐಸಿಟಿಇ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಹಸಿರು ನಿಶಾನೆ ತೋರಿವೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ದೇವೇಂದ್ರ ಹಂಚೆ ತಿಳಿಸಿದ್ದಾರೆ.
ಈಗಾಗಲೇ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಯಿಂಡ್ ಡಾಟಾ ಸೈನ್ಸ್ ಹಾಗೂ ಕಂಪ್ಯೂಟರ್ ಸೈನ್ಸ್ ಆಯಿಂಡ್ ಎಂಜಿನಿಯರಿಂಗ್ ಕೋರ್ಸಗಳು ನಡೆಯುತ್ತಿವೆ. ಎರಡು ಹೊಸ ಕೋರ್ಸಗಳೊಂದಿಗೆ ಈಗ ಕಾಲೇಜು ಒಟ್ಟು ನಾಲ್ಕು ಕೋರ್ಸಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೇವಲ ರೂ. 40 ಸಾವಿರ ಶುಲ್ಕ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನದಿಂದ ಕಾಲೇಜು ಶುಲ್ಕ ಭರಿಸಲು ಅವಕಾಶ ಇದೆ. ಶಿಷ್ಯವೇತನ ಸೌಲಭ್ಯ ಸಹ ಇದೆ ಎಂದು ತಿಳಿಸಿದ್ದಾರೆ.
ನಾಲ್ಕೂ ಕೋರ್ಸಗಳಲ್ಲಿ ಸಿವಿಲ್ ಎಂಜಿನಿಯರ್ 30 ಸ್ಥಾನ ಹಾಗೂ ಉಳಿದ ಮೂರು ಕೋರ್ಸಗಳಲ್ಲಿ ತಲಾ 60 ಸ್ಥಾನಗಳು ಇವೆ. ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆಯ ಪ್ರಮಾಣ ಪತ್ರ ಹೊಂದಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಶೇ 80 ರಷ್ಟು ಮೀಸಲಾತಿ ಇದೆ ಎಂದು ಹೇಳಿದ್ದಾರೆ.
ಸಿಇಟಿ ಫಲಿತಾಂಶ ಪ್ರಕಟವಾದ ನಂತರ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಸ್ಥಳೀಯ ವಿದ್ಯಾರ್ಥಿಗಳು ವಿವಿಧ ಕೋರ್ಸಗಳಲ್ಲಿ ಅಧ್ಯಯನ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಾಲೇಜು ಆವರಣದಲ್ಲಿ ಈಗಾಗಲೇ 200 ವಿದ್ಯಾರ್ಥಿಗಳ ಸಾಮಥ್ರ್ಯದ ವಿದ್ಯಾರ್ಥಿ ವಸತಿ ನಿಲಯ ಆರಂಭಗೊಂಡಿದೆ. ಬರುವ ದಿನಗಳಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣದ ಯೋಜನೆ ಇದೆ ಎಂದು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನದಿಂದ ಕಾಲೇಜಿನಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು ಅನುಕೂಲವಾಗಿದೆ. ಮಂಡಳಿಯ ರೂ. 6.5 ಕೋಟಿ ಅನುದಾನದಲ್ಲಿ ಮುಖ್ಯ ರಸ್ತೆಯಿಂದ ಕಾಲೇಜು ವರೆಗೆ ಸಿಸಿ ರಸ್ತೆ, ಕ್ಯಾಂಟೀನ್, ಗ್ರಂಥಾಲಯ ಕಟ್ಟಡ, ಪೀಠೋಪಕರಣ ಅಳವಡಿಕೆ ಮೊದಲಾದ ಕೆಲಸಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಜಿಲ್ಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವರವಾಗಿದೆ. ವಿದ್ಯಾರ್ಥಿಗಳು ಕಾಲೇಜಿನ ನೂತನ ಕೋರ್ಸಗಳ ಲಾಭ ಪಡೆಯಬೇಕು.
ರೇವಣಸಿದ್ಧ ಜಾಡರ್
ಎಪಿವಿಪಿ ಹಿರಿಯ ಮುಖಂಡ