ವಿದ್ಯಾರಣ್ಯ ಶಾಲೆಯಲ್ಲಿ ಅದ್ದೂರಿ ಶಾಲಾ ಪ್ರಾರಂಭೋತ್ಸವ
ಬೀದರ:ಜೂ.1: ನಗರದ ಸರಸ್ವತಿ ಶಿಕ್ಷಣ ವಿಕಾಸ ಸಮಿತಿ ಸಂಚಾಲಿತ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ
ಶಾಲಾ ಪ್ರಾರಂಭೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಮೊದಲಿಗೆ ಶಾಲೆಯ ಮುಖ್ಯ ದ್ವಾರದಲ್ಲಿ ಎಲ್ಲ ಮಕ್ಕಳಿಗೆ ಪುಷ್ಪವರ್ಷ ಮಾಡುವುದರ ಮೂಲಕ ಶಾಲೆಯ ಒಳಗೆ ಸ್ವಾಗತ ಕೋರಲಾಯಿತು. ಶಾಲಾ ಆವರಣ ಪುಷ್ಪ, ತಳಿರು-ತೋರಣಗಳಿಂದ ರಾರಾಜಿಸುತ್ತಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವುದರ ಮೂಲಕ ಪ್ರಾರಂಭಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಬೌದ್ಧಿಕ ನೀಡಿರುವ ಸಂಸ್ಥೆಯ ಅಧ್ಯಕ್ಷರಾದ ಪ್ರೊ|| ಎಸ್.ಬಿ. ಸಜ್ಜನಶೆಟ್ಟಿ ಅವರು ತಮ್ಮ ಪ್ರೇರಣಾದಾಯಕ ನುಡಿಗಳನ್ನು ಹೇಳುತ್ತ ಶಿಕ್ಷಣವು ಜೀವನದ ಬುನಾದಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆದರ್ಶಗಳನ್ನು ಕಲಿಯಲು ಹಾಗೂ ಆದರ್ಶಮಯವಾದ ಜೀವನವನ್ನು ನಡೆಸಲು ಶಾಲೆಗೆ ಹೋಗಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳು ಶಿಕ್ಷಣವನ್ನು ಜ್ಞಾನಕ್ಕಾಗಿ ಪಡೆಯಬೇಕೆ ವಿನಃ ಪರೀಕ್ಷೆಗಾಗಿ ಅಲ್ಲ. ನಮ್ಮ ಆದರ್ಶಗಳು ಲವ, ಕುಶ, ಧೃವ, ಪ್ರಹ್ಲಾದರಂತಾಗಿರಬೇಕು. ವಿದ್ಯಾರ್ಥಿಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಯುವಂತರಾಗಬೇಕು. ವಿದ್ಯಾರ್ಥಿಗಳು ಶಿಕ್ಷಣ ಹಾಗೂ ಸಂಸ್ಕಾರವನ್ನು ದೇಶದ ಬೆಳವಣಿಗೆಯಲ್ಲಿ ಬಳಸಬೇಕು. ತಮ್ಮಲ್ಲಾಗುವಂತಹ ಬದಲಾವಣೆಗಳೇ ಮೌಲ್ಯಾಂಕನವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಬಂಡೆಪ್ಪಾ ಎಕ್ಲಾರೆ ಹಾಗೂ ಶ್ರೀ ವಿದ್ಯಾರಣ್ಯ ಪ್ರೌಢ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಶ್ರೀ ಬಾಲಾಜಿ ರಾಠೋಡ್ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ 9ನೇ ತರಗತಿಯ ವಿದ್ಯಾರ್ಥಿನಿಯರಾದ ಸಾಹಿತ್ಯ ಮತ್ತು ಐಶ್ವರ್ಯಾ ಭಕ್ತಿಗೀತೆಯನ್ನು ಹಾಡಿದರು. ಶ್ರೀ ಬಾಲಾಜಿ ರಾಠೋಡ್ ಸ್ವಾಗತಿಸಿದರೆ, ಶ್ರೀಮತಿ ಉಜ್ವಲಾ ಶಿರಮಾ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ದಿಲೀಪ ದೇವಣಿ ಕಾರ್ಯಕ್ರಮದ ವಂದನಾರ್ಪಣೆ ಮಾಡಿದರು.