ವಿಶ್ವೇಶ್ವರಯ್ಯನವರದ್ದು ಬಹುಮುಖ ಪ್ರತಿಭೆ
ಬೀದರ, ಸೆ.೨೪ : ಸರ್. ಎಂ. ವಿಶ್ವೇಶ್ವರಯ್ಯನವರು ಈ ನಾಡು ಕಂಡ ಬಹುಮುಖ ಪ್ರತಿಭೆ. ಅವರು ಕೇವಲ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸದೆ ರಾಜ್ಯಾಡಳಿತ ವ್ಯವಸ್ಥೆ, ರಸ್ತೆ, ಕಟ್ಟಡ, ನೀರಾವರಿ, ಆರ್ಥಿಕತೆ, ಸಾಮಾಜಿಕ ಚಿಂತನೆ, ನಾಡು-ನುಡಿಯ ಬಗ್ಗೆ ಗೌರವ ಮುಂತಾದ ಕಾರಣಗಳಿಗಾಗಿ ಅವರು ನಮಗೆ ಬಹುಮುಖ್ಯ ಎನಿಸುತ್ತಾರೆಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಶಿವಶಂಕರ ಕಾಮಶೆಟ್ಟಿ ಅವರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಸರ್. ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಶ್ವೇಶ್ವರಯ್ಯನವರಿಗೆ ಸದಾ ಸಮಾಜದ ಬಗ್ಗೆ ಕಾಳಜಿ ಇತ್ತು, ಅವರಂತಹ ಇಂಜಿನಿಯರುಗಳನ್ನು ಈಗ ಹುಡುಕುವುದು ಕಷ್ಟ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ರಾಮಲಿಂಗ ಬಿರಾದಾರ ಅವರು ಮಾತನಾಡಿ, ವಿಶ್ವೇಶ್ವರಯ್ಯನವರು ೧೦೨ ವರ್ಷ ಬದುಕಿ ಸಾರ್ಥಕ ಮತ್ತು ಸರಳ ಜೀವನ ನಡೆಸಿದವರು ಎಂದರು. ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪೂರ್ಣಿಮಾ ಅವರು ತಮ್ಮ ಕಷ್ಟದ ಬದುಕಿನಲ್ಲೂ ಉತ್ತಮ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಶೈಕ್ಷಣಿಕ ಸೇವೆ ಅನನ್ಯವಾದುದು ಎಂದರು.
ವಿಶೇಷ ಉಪನ್ಯಾಸ ನೀಡಿದ ಬೀದರ ಜಿಲ್ಲಾ ಪ್ರಥಮ ಶೈಕ್ಷಣಿಕ ಸಮ್ಮೇಳನಾಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ ಅವರು ಮಾತನಾಡಿ, ವಿಶ್ವೇಶ್ವರಯ್ಯನವರು ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು. ಇದಾದ ಮೇಲೆ ಭಾರತೀಯ ನೀರಾವರಿ ಕಮಿಷನ್ ಸೇರಿದ ನಂತರ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ಬಹಳಷ್ಟು ಶ್ರಮಿಸಿದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ ವೊಂದನ್ನು ಕಂಡು ಹಿಡಿದರು. ಅವರ ಸೇವೆಯನ್ನು ಎಷ್ಟು ಹೊಗಳಿದರು ಕಡಿಮೆ ಎಂದು ಹೇಳಿದ ಅವರು ಪ್ರಥಮ ಶೈಕ್ಷಣಿಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿಯವರು ಮಾತನಾಡಿ, ಸಮ್ಮೇಳನವೊಂದನ್ನು ಯಶಸ್ವಿ ಮಾಡುವಲ್ಲಿ ಜಿಲ್ಲೆಯ ಅನೇಕರ ಶ್ರಮ ಇರುವುದನ್ನು ಸ್ಮರಿಸಿದರು. ವೇದಿಕೆಯ ಮೇಲೆ ಇಂಜಿನಿಯರುಗಳಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಗಣೇಶ ಶೀಲವಂತ, ಜ್ಞಾನಸುಧಾ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಧನರಾಜ್ ಹಂಗರಗಿ ಮತ್ತಿತರು ಇದ್ದರು.
ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಡಾ.ಶ್ರೇಯಾ ಮಹೀಂದ್ರಕರ್ ನಿರೂಪಿಸಿದರೆ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ವಂದಿಸಿದರು. ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿದ ಸರ್ವರನ್ನೂ ಸಮ್ಮೇಳನಾಧ್ಯಕ್ಷರಾದ ಪೂರ್ಣಿಮಾ ಜಿ. ಅವರು ಗೌರವಿಸಿದರು.