ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು, ಆರೋಗ್ಯವಾಗಿದ್ದಾರೆ: ವೈದ್ಯರ ಮಾಹಿತಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಹಾಗೂ ಕಾಂಗ್ರೆಸ್ ನ ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಆರೋಗ್ಯವಾಗಿದ್ದಾರೆ, ಹೆದರುವ ಅವಶ್ಯಕತೆ ಇಲ್ಲ  ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ಕಫ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಉಸಿರಾಟದ ತೊಂದರೆ ಕಾಣಿಸಿತು. ಕೂಡಲೇ ದಾವಣಗೆರೆ ನಗರದ ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಿ, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಬೆಂಗಳೂರಿನ ಸ್ಪರ್ಷ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು. ಎಸ್. ಎಸ್. ಹೈಟೆಕ್ ಆಸ್ಪತ್ರೆಗೆ ಹೃದಯ ಸಂಬಂಧಿ ಹಾಗೂ ಉಸಿರಾಟದ ತೊಂದರೆ ಕಂಡು ಬಂದ ಹಿನ್ನೆಲೆಯಲ್ಲಿ ದಾಖಲಿಸಲಾಯಿತು. ಬೆಳಿಗ್ಗೆ ಉಪಾಹಾರ ಸೇವಿಸಿದ್ದ ಶಾಮನೂರು ಶಿವಶಂಕರಪ್ಪರು ಆರಾಮಾಗಿದ್ದರು. ಮಧ್ಯಾಹ್ನದ  ವೇಳೆಗೆ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯದಲ್ಲಿ ಏರುಪೇರಾಗಿತ್ತು.ಉಸಿರಾಟದ ತೊಂದರೆ ಹಿನ್ನಲೆ ಫೇಸ್ ಮೇಕರ್ ಅಳವಡಿಕೆ ಮಾಡಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ತೊಂದರೆ ಇಲ್ಲ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.