ಗಾಂಧಿಯ ತತ್ವಗಳೇ ಎನ್ ಎಸ್ ಎಸ್ ನ ಅಡಿಪಾಯ: ಡಾ.ಶುಭ ಮರವಂತೆ

ಸಂಜೆವಾಣಿ ವಾರ್ತೆ
ಶಿವಮೊಗ್ಗ.ಜೂ.೧ : ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಮೇ 25 ರಿಂದ 31 ರವರೆಗೆ ಬಾಳೆಕೊಪ್ಪ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಶಿಬಿರವನ್ನು ಉದ್ಘಾಟಿಸಿದ ಕುವೆಂಪು ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ಶುಭ ಮರವಂತೆಯವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಗಾಂಧಿಯ ತತ್ವಗಳನ್ನು ಸ್ವಾತಂತ್ರೋತ್ತರದಲ್ಲೇ ಅಡಿಪಾಯವಾಗಿಟ್ಟುಕೊಂಡು ಪ್ರಾರಂಭಿಸಿದ ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ಸಮನ್ವಯತೆ, ಸೌಹಾರ್ದತೆ ಹಾಗೂ ಸ್ವಯಂಸೇವೆಯ ಮನೋಭಾವವನ್ನು ಮೂಡಿಸುತ್ತದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವ ಮತ್ತು ದೂರದೃಷ್ಟಿಯನ್ನು ವಿವರಿಸುತ್ತಾ ‘ನನಗಲ್ಲ ನಿನಗೆ’ ಎಂಬ ಧ್ಯೇಯ ವಾಕ್ಯವು ಬಹಳ ದೊಡ್ಡ ಮೌಲ್ಯವನ್ನು ವ್ಯಕ್ತಿತ್ವದಲ್ಲಿ ಸೇರ್ಪಡೆಗೊಳಿಸುತ್ತದೆ ಎಂದು ಅವರು ಉದಾಹರಣೆಗಳೊಂದಿಗೆ ತಿಳಿಸಿದರು. ಸಮಾರಂಭದಲ್ಲಿ ಬಾಳೆಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ವಾಸು, ಉಪಾಧ್ಯಕ್ಷರಾದ ಆಶಾ ಬಾಗೇಶ್, ಸದಸ್ಯರಾದ  ಆಶಾ ಜಯಣ್ಣ,  ರುದ್ರಪ್ಪ,  ಧರ್ಮಪ್ಪ,  ಪ್ರಕಾಶ್,  ಕವಿತಾ ಗುತ್ತೇರ್ ಹಾಗೂ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಡಾ.ರಾಜೇಂದ್ರ ಚೆನ್ನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ವಹಿಸಿದ್ದರು. ಏಳು ದಿನಗಳ ಶಿಬಿರದಲ್ಲಿ ಗ್ರಾಮದ ಸ್ವಚ್ಛತೆ, ಅರಿವಿನ ಕಾರ್ಯಕ್ರಮಗಳು, ಪಥ ಸಂಚಲನ, ಸುಬ್ಬಯ್ಯ ಮೆಡಿಕಲ್ ಕಾಲೇಜು ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಹಾಗೂ ರೋಟರಿ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆವರಣದಲ್ಲಿ ನಡೆದ ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಶಾಲೆಯ ಗೋಡೆಗಳಿಗೆ ಹಸೆ ಚಿತ್ತಾರಗಳನ್ನು ಬರೆದರು. ಏಳು ದಿನಗಳ ಗ್ರಾಮವಾಸ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಬಾಳೆಕೊಪ್ಪ ಗ್ರಾಮದ ಜನರೊಂದಿಗೆ ಒಡನಾಡಲು, ಹಲವಾರು ಕೌಶಲ್ಯಗಳನ್ನು ಕಲಿಯಲು ಹಾಗೂ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಯಿತು.