ಹೊಸ ತಂತ್ರಜ್ಞಾನ ಬಳಕೆಯಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ: ಡಾ.ಬಿಡವೆ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ1 ವಿಜಯನಗರ: ದೇಶದ ಸಾಮಾಜಿಕ, ಆರ್ಥಿಕ ಹಾಗೂ ತಾಂತ್ರಿಕ ಪರಿವರ್ತನೆಯಲ್ಲಿ ನೂತನ ಎಐ(ಆರ್ಟಿಫಿಷಿಯಲ್ ತಂತ್ರಜ್ಞಾನ)ದ ಬಳಕೆ ಮಹತ್ವದ ಪಾತ್ರ ವಹಿಸಲಿದೆ. ಅಂತಹ ವಿನೂತನ ತಂತ್ರಜ್ಞಾನವನ್ನು ಇಂಜಿನಿಯರಿಂಗ್ ಪದವೀಧರರು ಸಂಶೋಧನಾತ್ಮಕವಾಗಿ, ಸಮರ್ಥವಾಗಿ ಬಳಸಿಕೊಳ್ಳಬೇಕು. ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಜತೆಗೆ ದೇಶದ ಗ್ರಾಮೀಣ ಪ್ರದೇಶಗಳ ಪ್ರಗತಿಗೆ ಕಾರಣರಾಗಬೇಕು ಎಂದು ಕಲಬುರ್ಗಿಯ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಪತಿ ಡಾ.ಅನಿಲಕುಮಾರ ಬಿಡವೆ ಸಲಹೆ ನೀಡಿದರು.
ಹೊಸಪೇಟೆಯ ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಲೇಜು ವಾರ್ಷಿಕೋತ್ಸವ `ಸಿಂಚನ-24’ದ ಭಾಗವಾಗಿ ಏರ್ಪಡಿಸಿದ್ದ ಪದವಿ ದಿನಾಚರಣೆ ಯನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂದಿನ ಯುವಕರಲ್ಲಿ ಆಧುನಿಕತೆ ಬೇಡುವ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ. ಡೆಸ್ಸೌಲ್ಟ್ ವರದಿ ಪ್ರಕಾರ ವಿಶ್ವದಲ್ಲಿ ಸುಮಾರು 85 ದಶಲಕ್ಷ ಹುದ್ದೆಗಳು ಕೌಶಲ್ಯ ಹೊಂದಿರುವ ವ್ಯಕ್ತಿಗಳು ಸಿಗದೇ, ಖಾಲಿ ಬಿದ್ದಿವೆ. ಇದು ಭಾರತ ಜಿಡಿಪಿಗಿಂತ ದೊಡ್ಡದು. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಕ್ಷೇತ್ರವೂ ಕೌಶಲ್ಯಗಳನ್ನು ಬೇಡುತ್ತಿದ್ದು, ಅದಕ್ಕೆ ಇಂದಿನ ಯುವ ಜನತೆ ಸಿದ್ಧರಾಗುವುದು ಅಗತ್ಯ ಎಂದು ಒತ್ತಿ ಹೇಳಿದರು.
ದೇಶದಲ್ಲಿ 4 ಹಂತದ ಔದ್ಯೋಗಿಕ ಕ್ರಾಂತಿಯ ಹೊಸ್ತಿಲಲ್ಲಿದ್ದೇವೆ. ದೇಶದ ಮುಂಚೂಣಿ ಶೈಕ್ಷಣ ಸಂಸ್ಥೆಗಳ ತಾಂತ್ರಿಕ ಪದವೀಧರರು ಹೆಚ್ಚಿನ ಸಂಬಳ, ಸ್ಥಾನಮಾನಕ್ಕಾಗಿ ವಿದೇಶಕ್ಕೆ ಹಾರಿದರೆ,  ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನದ ಯಶಸ್ಸಿನಲ್ಲಿ 2 ಮತ್ತು 3ನೇ ಹಂತದ ನಗರಗಳ ಕಾಲೇಜುಗಳಲ್ಲಿ ತಾಂತ್ರಿಕ ಪದವಿ ಗಳಿಸಿದ ವಿದ್ಯಾರ್ಥಿಗಳು ಭಾಗಿಯಾಗಿರುವುದು ಹೆಮ್ಮೆಯ ಸಂಗತಿ. ಹೀಗಾಗಿ ಯಾವ ಕಾಲೇಜಿನಲ್ಲಿ ಪದವಿ ಪಡೆದಿದ್ದೇವೆ ಎಂಬುದಕ್ಕಿಂತ ವೃತ್ತಿಯಲ್ಲಿ ಎಷ್ಟು ನಿಪುಣರು ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು. ಕಲಿಕೆ ಎಂಬುದು ಕಾಲೇಜಿಗೆ ಸೀಮಿತವಾಗದೇ, ನಿತ್ಯ ನಿರಂತರವಾಗಬೇಕು. ಅಂದಾಗ ಮಾತ್ರ ಉನ್ನತ ಹುದ್ದೆಗೇರಿ, ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೆ. ತಿಪ್ಪೇರುದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ಸದಾ ಧನಾತ್ಮಕ ಮನೋಭಾವದ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕು. ಸರಿಯಾದ ಯೋಚನೆ, ಜನರ ವಿಶ್ವಾಸ, ಸತತ ಪ್ರಯತ್ನ ಹಾಗು ಸಮಾಜದ ಬಗ್ಗೆ ಕೃತಜ್ಞತೆ ಎಂಬ ಈ ನಾಲ್ಕು ಮಂತ್ರಗಳೊಂದಿಗೆ ಆಧುನಿಕ ಜೀವನವನ್ನು ಆರೋಗ್ಯಕರವಾಗಿ ಕಟ್ಟಿಕೊಳ್ಳಬೇಕು ಎಂದರು.
ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಮಾತನಾಡಿ, ಕೋರೋನ ಕಾಲಘಟ್ಟದಲ್ಲಿ ಎಷ್ಟೋ ರಾಷ್ಟ್ರಗಳು ದಿವಾಳಿಯಾಗಿವೆ. ಆದರೆ, ಕೌಶಲ್ಯಪೂರ್ಣ ಭಾರತ ಗಟ್ಟಿಯಾಗಿ ನಿಂತಿದೆ. ಎಪಿಜೆ ಅಬ್ದುಲ್ ಕಲಾ ಅವರ ಆಶಯದಂತೆ 2024ರಲ್ಲಿ ಭಾರತ ಕೌಶಲ್ಯಪೂಣವಾಗಿದ್ದು, 2047ರ ವೇಳೆಗೆ ತಂತ್ರಜ್ಞಾನ, ಕೌಶಲ್ಯಯುಕ್ತವಾಗಲಿದೆ. ಇಂಜಿಯರಿಂಗ್ ಪದವೀದರರು ಸರ್ಕಾರಿ, ಐಟಿ ಅವಕಾಶಗಳಿಗಾಗಿ ಕಾಯದೇ, ಹೊಸಪೇಟೆ ಸುತ್ತಲು ಮೈನಿಂಗ್ ಹಬ್‍ಗಳು, ಹಂಪಿ ಪ್ರವಾಸೋದ್ಯಮವನ್ನು ಕೇಂದ್ರೀಕರಿಸಿ, ಹೊಸ ಸ್ಟಾರ್ಟ್ ಅಪ್ ಗಳತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು.
2022 -23ನೇ ಸಾಲಿನ ವಿಟಿಯು ನಿಂದ ಎಂ.ಟೆಕ್‍ನ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದ ಪುರುಷೋತ್ತಮ್ ಹಾಗೂ ಬಿ.ಇ. ಮೆಕಾನಿಕಲ್ ವಿಭಾಗದಲ್ಲಿ ಮೂರನೇ ರ್ಯಾಂಕ್ ಪಡೆದ ಎ.ಪವನಕುಮಾರ್ ರಾಜು ಗೆ ಪ್ರಮಾಣ ಪತ್ರ ನೀಡಿ, ಸನ್ಮಾನಿಸಲಾಯಿತು. ಬಿ.ಇ., ಎಂ.ಟೆಕ್., ಹಾಗೂ ಎಂ.ಬಿ.ಎ. ವಿಭಾಗಗಳಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು.
ವೇದಿಕೆ ಮೇಲೆ ವೀ.ವಿ. ಸಂಘದ ಅಧ್ಯಕ್ಷರಾದ ಶ್ರೀ ಅಲ್ಲಂ ಗುರುಬಸವರಾಜ್, ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ಕಾರ್ಯದರ್ಶಿ ಡಾ.ಅರವಿಂದ್ ಪಟೇಲ್, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಶರಣ ಬಸವನಗೌಡ, ಮೇಟಿ ನಾಗರಾಜ್, ಕಾಲೇಜಿನ ಪ್ರಾಚಾರ್ಯ ಡಾ. ರೋಹಿತ್ ಯು.ಎಂ, ಉಪ ಪ್ರಾಚಾರ್ಯ ಪೆÇ್ರ.ಪಾರ್ವತಿ ಕಡ್ಲಿ, ಡೀನ್ ಆದ ಡಾ.ಅರುಣ್ ಮುಧೋಳ, ಕಾರ್ಯಕ್ರಮದ ಸಹ ಸಂಯೋಜಕರಾದ ರವಿಕುಮಾರ್ ಎಸ್.ಪಿ. ಉಪಸ್ಥಿತರಿದ್ದರು.