ರಸಗೊಬ್ಬರ -ಬಿತ್ತನೆ ಬೀಜ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಪರವಾನಿಗೆ ರದ್ದು

ಸಂಜೆವಾಣಿ ವಾರ್ತೆ
 ಶಿವಮೊಗ್ಗ.ಜೂ.೧; ಮಾರಟಗಾರರು ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ರೈತರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ಕಂಡು ಬಂದಲ್ಲಿ ಪರವಾನಗೆ ರದ್ದು ಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದರು.ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ  ಮುಂಗಾರು ಹಂಗಾಮು ಪೂರ್ವ ಸಿದ್ಧತಾ ಸಭೆಯನ್ನು ನಡೆಸಿ ಮಾತನಾಡಿದ ಅವರು ಜಿಲ್ಲೆಯ ಉಪ ಕೃಷಿ ನಿರ್ದೇಶಕರು ಮತ್ತು ಸಹಾಯಕ ಕೃಷಿ ನಿರ್ದೇಶಕರಗಳು ಹಾಗೂ ಕೃಷಿ ಅಧಿಕಾರಿಗಳು ಎಲ್ಲೆಲ್ಲಿ ಬಿತ್ತನೆ ಬೀಜಗಳು ಲಭ್ಯವಿರುತ್ತವೆಯೋ ಅಲ್ಲಿಂದ ಕೊರತೆ ಇರುವ ಕಡೆ ಪೂರೈಸಲು ಕ್ರಮ ವಹಿಸುವುದರ ಜೊತೆಗೆ ಎಲ್ಲಾ ಪರಿಕರಗಳನ್ನು ಗರಿಷ್ಟ ಮಾರಾಟ ದರದೊಳಗೆ ಮಾರಾಟ ಮಾಡುತ್ತಿರುವ ಬಗ್ಗೆ ಹಾಗೂ ಯಾವುದೇ ರೀತಿಯ ಸಂಪರ್ಕಗಳನ್ನು ಮಾಡದ ರೀತಿಯಲ್ಲಿ ಸಮನ್ವಯ ಸಾಧಿಸಿ ಮಾರಾಟಗಾರರು ರೈತರಿಗೆ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಅಂತವರ ಪರವಾನಿಗೆಯನ್ನು ರದ್ದು ಪಡಿಸುವ ಬಗ್ಗೆ ಸೂಕ್ತಕ್ರಮ ವಹಿಸುವಂತೆ ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕರಾದ ಜಿ.ಸಿ ಪೂರ್ಣಿಮ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಜನವರಿಯಿಂದ ಇಲ್ಲಿಯವರೆಗೆ 124 ಮಿ.ಮೀ ವಾಡಿಕೆ ಮಳೆಗೆ 199 ಮಿ.ಮೀ ಮಳೆಯಾಗಿದ್ದು, ಶೇ. 61 ರಷ್ಟು ಹೆಚ್ಚವರಿ ಮಳೆ ಅಗಿರುತ್ತದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾದ ಪ್ರಯುಕ್ತ 2024-25ರ ಮುಂಗಾರು ಹಂಗಾಮಿನ ವಾಡಿಕೆ ವಿಸ್ತೀರ್ಣ 1,23,580 ಹೆಕ್ಟೇರ್‍ಗೆ ಕೇವಲ 400 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ಪ್ರಗತಿಯಲ್ಲಿದೆ.