ಪ್ರವಾಹ ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸಜ್ಜಾಗಿ :ಜಿಲ್ಲಾಧಿಕಾರಿ ಡಾ.ಸುಶೀಲ.ಬಿ
ಯಾದಗಿರಿ:ಜೂ.1:ಮಳೆಗಾಲ ಪ್ರಾರಂಭವಾಗುತ್ತಿದ್ದು, ನದಿ ತೀರದ ಪ್ರದೇಶಗಳು ಸೇರಿದಂತೆ ಮುಳುಗಡೆಯಾಗುವ ಪ್ರದೇಶಗಳ ಮೇಲೆ ನಿಗಾವಹಿಸಿ ಪ್ರವಾಹ ಪ್ರಕೃತಿ ವಿಕೋಪ ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ವಿಪತ್ತು ನಿರ್ವಹಣೆ , ಬರ ಪರಿಹಾರ, ಕುಡಿಯುವ ನೀರು ಹಾಗೂ ಮುಂಗಾರು ಪೂರ್ವ ಸಿದ್ದತೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಪ್ರವಾಹ ಮುನ್ನೆಚ್ಚರಿಕೆಗೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನದ ಮಳೆಯ ವರದಿ ಪ್ರಕೃತಿ ವಿಕೋಪದಿಂದ ಉಂಟಾಗುವ ಮಾನವ ಜಾನುವಾರು, ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿ ಮತ್ತು ಮಳೆಗೆ ಬಿದ್ದಿರುವ ಮನೆಗಳ ವರದಿಯನ್ನು ಪ್ರತಿದಿನ ಸಲ್ಲಿಸಬೇಕು. ಪ್ರತಿ ಹಳ್ಳಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯದರ್ಶಿಗಳು ತಮ್ಮ ತಮ್ಮ ಕ್ಷೆ?ತ್ರದಲ್ಲಿದ್ದು ಯಾವುದೇ ತೊಂದರೆಯಾಗುವ ಸಂಭವಿದ್ದಲ್ಲಿ ಆ ಕುರಿತು ಡಂಗೂರ ಬಾರಿಸಿ ಸಾರ್ವಜನಿಕರಿಗೆ ಎಚ್ಚರಿಕೆಯನ್ನೂ ನೀಡಬೇಕು ಎಂದು ಹೇಳಿದರು.
ಅಗ್ನಿ ಶಾಮಕ ಇಲಾಖೆಯವರು ನದಿಗಳಲ್ಲಿ ನೀರು ಏರಿಬಂದಲ್ಲಿ ನದಿ ತೀರದ ಹಳ್ಳಿಯ ಜನರ ಸಂರಕ್ಷಣೆಗೆ ಬೋಟುಗಳ ಅವಶ್ಯಕತೆಯ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಹೋಮ್‍ಗಾರ್ಡ್ ಸಿಬ್ಬಂದಿಗಳನ್ನು ಸಂಪರ್ಕದಲ್ಲಿಟ್ಟುಕೊಂಡು ಜನರ ಸಂರಕ್ಷಣೆಗೆ ನಿಲ್ಲಬೇಕು. ಆರೋಗ್ಯ ಇಲಾಖೆ ಜನಸಾಮಾನ್ಯರಿಗೆ ಔಷಧಿಗಳ ದಾಸ್ತಾನು ಕುರಿತು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಕಷ್ಟುಸಂಗ್ರಹವಿದೆಯೋ ಎನ್ನುವ ಬಗ್ಗೆ ನೋಡಿಕೊಳ್ಳಬೇಕು. ದನಕರುಗಳಿಗೆ ಮೇವು, ಔಷಧಿಗಳ ವ್ಯವಸ್ಥೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಹಾವು ಇನ್ನಿತರ ವಿಷ ಜಂತುಗಳ ಕಡಿತದಿಂದ ತೊಂದರೆಗಳಾಗುವ ಜನರಿಗೆ ಸೂಕ್ತ ಔಷಧೋಪಚಾರ ನೀಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಬೇಕು ಎಂದು ಅವರು ಸೂಚಿಸಿದರು.
ಪ್ರವಾಹದಿಂದ ಹಾಗೂ ಜಲಾಶಯಗಳ ಹಿನ್ನಿ?ರಿನಿಂದ ಮುಳುಗಡೆಯಾಗಬಹುದಾದ ಪ್ರದೇಶಗಳನ್ನು ಗುರುತಿಸಿಕೊಂಡು, ಅಂತಹ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮುಂಚಿತವಾಗಿಯೇ ತೆರವುಗೊಳಿಸಿ ಕ್ರಮ ಜರುಗಿಸಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ ಅಲ್ಲಿ ಮೂಲ ಸೌಕರ್ಯಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸೇತುವೆಗಳ ಬದಿ, ನದಿ ದಂಡೆ ಮುಂತಾದವು ಶಿಥಿಲಾವಸ್ಥೆಯಲ್ಲಿರುವುದನ್ನು ಪತ್ತೆ ಹಚ್ಚಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ನದಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಹಲಗೆ, ಗೇಟ್‍ಗಳನ್ನು ತೆರವುಗೊಳಿಸಬೇಕು. ಪ್ರವಾಹ ಎದುರಿಸಲು ಸೂಕ್ತ ಯೋಜನೆ ಸನ್ನದ್ಧವಾಗಿಟ್ಟುಕೊಂಡು ಅಧಿಕಾರಿಗಳು ಸಕಲ ರೀತಿಯಲ್ಲಿ ಸಜ್ಜುಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಅಧಿಕಾರಿಗಳೊಂದಿಗೆ ಗೂಗಲ್ ಮೀಟ್ ಸಭೆ
ಇದೇ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಮನೋಜ್ ಜೈನ್ ಅವರು ಅಧಿಕಾರಿಗಳೊಂದಿಗೆ ಗೂಗಲ್ ಮೀಟಿಂಗ್ ಸಭೆ ನಡೆಸಿ, ಜಿಲ್ಲೆಯಲ್ಲಿ ರೈತರಿಗೆ ಬೀಜ, ರಸಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಬೇಕು. ಬರ ಪರಿಹಾರವನ್ನು ಆದ್ಯತೆ ಮೇಲೆ ಸಂಬಂಧಿಸಿದ ರೈತರಿಗೆ ವಿತರಿಸಬೇಕು. ವಿಶೇಷವಾಗಿ ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸುವ ಕುರಿತಂತೆ ಯೋಜನೆಯನ್ನು ರೂಪಿಸಿ ರೈತರಲ್ಲಿ ಸೂಕ್ತ ಜಾಗೃತಿ ಮೂಡಿಸುವಂತೆ ಸೂಚನೆ ನೀಡಿದರು.
ರೈತರಿಗೆ ಇತ್ತೀಚಿಗೆ ಸುರಿದ ಮಳೆಯಿಂದ ಆದ ಮನೆಹಾನಿ ಸೇರಿದಂತೆ ಇನ್ನಿತರ ಹಾನಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ವರದಿಯನ್ನು ಸಿದ್ಧವಾಗಿ ಇಟ್ಟುಕೊಳ್ಳಬೇಕು. ಅದರಂತೆ ಮಳೆ, ಸಿಡಿಲಿನಿಂದ ಸಾವನ್ನಪ್ಪಿದವರ ವಾರಸುದಾರರಿಗೆ ಪರಿಹಾರ ವಿತರಿಸಬೇಕು. ಮುಂದಿನ ದಿನಗಳಲ್ಲಿ ಪ್ರವಾಹಕ್ಕೆ ಸಂಬಂಧಿಸಿದಂತೆ ಎಲ್ಲಾ ಮುಂಜಾಗ್ರತೆಗಳು ಮಾಡಿಕೊಳ್ಳಲು ಎಲ್ಲಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ, ಜಿಲ್ಲಾ ಪಂಚಾಯತ ಸಿಇಓ ಗರಿಮಾ ಪನ್ವಾರ, ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಸಹಾಯಕ ಆಯುಕ್ತ ಪ್ರಕಾಶ ಕುದರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಸಿಬ್ಬಂದಿ ವರ್ಗ ಇನ್ನಿತರರು ಉಪಸ್ಥಿತರಿದ್ದರು.