ನರೇಗಾ ಕೂಲಿಗಾರರ ಆರೋಗ್ಯ ವಿಚಾರಿಸಿದ ಜಿ.ಪಂ ಸಿಇಒ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧; ಮೊಳಕಾಲ್ಮುರು ತಾಲ್ಲೂಕು ತಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಳ್ಳಿ ಕೆರೆ ಅಂಗಳದಲ್ಲಿ ಹೂಳು ತೆಗೆಯುವ ಕಾಮಕಾರಿ ಮತ್ತು ಕೋನಪುರ ಗ್ರಾಮದ ಸರ್ಕಾರಿ ಹಳ್ಳ ಹೂಳು ತೆಗೆಯುವ ಕಾಮಗಾರಿ ಹಾಗೂ ರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡೇರಹಳ್ಳದಲ್ಲಿ ಹೂಳು ತೆಗೆಯುವ ಚಾಲನೆಯಲ್ಲಿರುವ ಕಾಮಗಾರಿ ಸ್ಥಳಕ್ಕೆ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಭೇಟಿ ನೀಡಿ ಹೂಳು ತೆಗೆಯುತ್ತಿದ್ದ ಕೂಲಿಗಾರರೊಂದಿಗೆ ಚರ್ಚಿಸಿದರು.ಜಾಬ್‍ಕಾರ್ಡ್ ಹೊಂದಿರುವ ಕೂಲಿಗಾರರಿಗೆ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಒಂದು ಆರ್ಥಿಕ ವರ್ಷಕ್ಕೆ 100 ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿ ಯಾರು ಗುಳೆ ಹೊಗದೇ ತಮ್ಮ ತಮ್ಮ ಗ್ರಾಮಗಳಲ್ಲಿರುವ ಕೆರೆ, ಕಾಲುವೆ, ಗೋಕಟ್ಟೆ ಮತ್ತು ಚೆಕ್ ಡ್ಯಾಂ ಹೂಳು ತೆಗೆಯಬಹುದು. ಮಹಿಳೆಯರು ಮತ್ತು ಪುರುಷರು ಕೂಲಿಕೆಲಸ ಮಾಡಿ ದಿನಕ್ಕೆ ರೂ.349/- ಗಳಿಸಿ, ಇಬ್ಬರಿಗೂ ಸಮಾನ ಕೂಲಿ ಇರುವುದರಿಂದ ಗ್ರಾಮೀಣ ಕುಟುಂಬಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ಮಹಿಳೆಯರು ಹೆಚ್ಚಿನ ಸ್ವಾವಲಂಬನೆಯಿಂದ ಬದುಕಲು ಈ ಯೋಜನೆ ತುಂಬಾ ಸಹಕಾರಿಯಾಗಿದೆ. ಆದ್ದರಿಂದ ಮಹಿಳಾ ನರೇಗಾ ಕೂಲಿಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.