371(ಜೆ) ಕಲಂ ಅಪಪ್ರಚಾರ ಖಂಡಿಸಿ ಪ್ರತಿಭಟನೆ
ಕಲಬುರಗಿ,ಜೂ.1:ಬೆಂಗಳೂರಿನಲ್ಲಿ 371ನೇ(ಜೆ) ಕಲಂ ವಿರುದ್ಧ ಹಮ್ಮಿಕೊಂಡಿರುವ ಹೋರಾಟದ ವಿರುದ್ಧ ಸಾಂಕೇತಿಕವಾಗಿ ಎಚ್ಚರಿಕೆ ನೀಡುವ ಮೂಲಕ ಇಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ನಗರದ ಸರ್ದಾರ ವಲ್ಲಭ ಭಾಯಿ ಪಟೇಲ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಮುಖಂಡರು, ಆಯಾ ಕ್ಷೇತ್ರದ ಗಣ್ಯರು, ಸಾಹಿತಿಗಳು ಹಾಗೂ ಕನ್ನಡಪರ, ಜನಪರ, ದಲಿತ, ಹಿಂದುಳಿದ, ಅಲ್ಪ ಸಂಖ್ಯಾತರ, ರೈತ ಕಾರ್ಮಿಕ, ವಿದ್ಯಾರ್ಥಿ ಪರ, ಕೈಗಾರಿಕಾ, ವಾಣಿಜ್ಯ ಸಂಸ್ಥೆ,ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ಜಾರಿಯಾದ ನಂತರ ಕರ್ನಾಟಕ ರಾಜ್ಯದ ಬಹಳಷ್ಟು ಹುದ್ದೆಗಳು ಕಲ್ಯಾಣ ಕರ್ನಾಟಕದವರೇ ಕಬಳಿಸುತ್ತಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿಯೂ ಕಲ್ಯಾಣದವರೇ ಮೇಲುಗೈ ಸಾಧಿಸುತ್ತಿದ್ದಾರೆ. ಇದರಿಂದ ರಾಜ್ಯದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಅಪಪ್ರಚಾರ ಮಾಡುವ ಮುಖಾಂತರ 24 ಜಿಲ್ಲೆಯ ಜನರಿಗೆ ತಪ್ಪು ಸಂದೇಶ ನೀಡುವ ಸಂವಿಧಾನ ವಿರೋಧಿ ಕೃತ್ಯ ನಡೆಸುವ ಮುಖಾಂತರ ಇಂದು ಬೆಂಗಳೂರಿನಲ್ಲಿ 371ನೇ(ಜೆ) ಕಲಂ ವಿರುದ್ಧ ಹೋರಾಟ ಹಮ್ಮಿಕೊಂಡಿರುವುದು ಖಂಡನೀಯ. ಇಂತಹ ಸಂವಿಧಾನ ವಿರೋಧಿ ಹೋರಾಟಕ್ಕೆ ರಾಜ್ಯಪಾಲರು ಮತ್ತು ಸರಕಾರ ಸ್ಪಂದಿಸದಿರಲು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಬಸವರಾಜ ದೇಶಮುಖ,ಶಾಂತಪ್ಪ ಸುರನ್,ಪ್ರತಾಪಸಿಂಗ್ ತಿವಾರಿ,ಡಾ. ಎಸ್.ಎ. ಖಾದರಿ, ದೀಪಕ ಗಾಲಾ,ಬಸವರಾಜ ಕುಮನೂರ,ಡಾ. ಬಿ.ಸಿ.ಗುಳಶೆಟ್ಟಿ, ಲಿಂಗರಾಜ ಸಿರಗಾಪೂರ,ಮನೀಷ ಜಾಜು , ಡಾ. ಮಾಜಿದ್ ದಾಗಿ,ಮಾಲಾ ಕಣ್ಣಿ, ವಿನೋದಕುಮಾರ ಜೇನೇವರಿ,ದತ್ತು ಭಾಸಗಿ,.ಜ್ಞಾನಮಿತ್ರ ಸ್ಯಾಮ್ಯೂವೆಲ್, ಶಿವಲಿಂಗಪ್ಪ ಭಂಡಕ, ಅಸ್ಲಂ ಚೌಂಗೆ, ಅಬ್ದುಲ ರಹೀಂ, ಅಬ್ದುಲ ಖದೀರ್‍ಸೇರಿದಂತೆ ಅನೇಕರು ಭಾಗವಹಿಸಿದರು.