ನಿವೃತ್ತರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭ
ಸಂಜೆವಾಣಿ ನ್ಯೂಸ್
ಕೊಳ್ಳೇಗಾಲ ಜೂ 1:- ತಾಳ್ಮೆ, ಶಿಸ್ತು, ಬದ್ಧತೆ, ಪ್ರಾಮಾಣಿಕತೆ ಎಂಬುದು ವಕ್ತಿತ್ವಕ್ಕೆ ಮೆರಗು ಇದ್ದಂತೆ ಹೀಗಾಗಿ ಇಂದಿನ ಪೀಳಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಕರ್ತವ್ಯ ಹಾದಿಯಲ್ಲಿ ಪ್ರಾಮಾಣಿಕವಾಗಿ ಸಾಗಿ ಅರಣ್ಯ ಸಂಪತ್ತು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ವೈಲ್ಡ್ ಲೈಫ್ ಸಿಸಿಎಫ್ ಈರಲಾಲ್ ಅವರು ತಿಳಿಸಿದರು.
ಕೊಳ್ಳೇಗಾಲ ಅರಣ್ಯ ಇಲಾಖೆಯ ಕಾವೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾವೇರಿ ವನ್ಯಜೀವಿ ವಿಭಾಗದ ವತಿಯಿಂದ ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು.ಎನ್.ಎಂ. ಹಾಗೂ ಪ್ರಥಮ ದರ್ಜೆ ಸಹಾಯಕರಾದ ಸೋಮಶೇಖರಪ್ಪ. ಎಸ್. ಅವರಿಗೆ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕೊಳ್ಳೇಗಾಲ ಮಲೆ ಮಹದೇಶ್ವರಬೆಟ್ಟ ವನ್ಯಜೀವಿ ಧಾಮ ವಲಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷ್ ಕುಮಾರ್ ಮಾತನಾಡಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ಮಾಡುವ ಅಧಿಕಾರಿಗಳು ತಮ್ಮಗಳ ಅವಧಿಯಲ್ಲಿ ಮಾಡುವ ಕಾರ್ಯ ಬಗ್ಗೆ ದಾಖಲೀಕರಣ ಆಗುವಂತಾಗಬೇಕು.
ಅರಣ್ಯ ಸಂಪತ್ತು ಸಂರಕ್ಷಣೆ, ಅಭಿವೃದ್ಧಿ ಹಾಗೂ ಇನ್ನಿತರ ಉಪಯುಕ್ತ ಕಾರ್ಯಗಳಿಗೆ ಒತ್ತು ನೀಡಿ ಇಲಾಖೆಗೆ ಕೀರ್ತಿ ಬರುವಂತೆ ಶ್ರಮಿಸಬೇಕು ಎಂದರಲ್ಲದೆ ಕರ್ತವ್ಯದಲ್ಲಿ ನೋವು ನಲಿವು ಸಹಜ ಹೀಗಾಗಿ ಸಮಾನವಾಗಿ ಸ್ವೀಕರಿಸಿ ಇಲಾಖೆ ಕೆಲಸಕ್ಕೆ ಬದ್ಧರಾಗಿರಬೇಕು ಎಂದು ತಿಳಿಸಿದರು.
ಇದೆ ವೇಳೆ ನಿವೃತ್ತ ಎಸಿಎಫ್ ಅಂಕಾರಾಜು ಅವರ ಕರ್ತವ್ಯ ಹಾಗೂ ವೃತ್ತಿ ಜೀವನ ಕುರಿತು ಅರಣ್ಯ ಇಲಾಖೆ ಸಿಬ್ಬಂಧಿಗಳು ಅನಿಸಿಕೆಗಳನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನಿವೃತ್ತ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಎಸಿಎಫ್ ನಾಗೇಂದ್ರ, ನಿವೃತ್ತ ಡಿಸಿಎಫ್ ಆರ್.ಉದಯಕುಮಾರ್, ಡಿಸಿಎಫ್ ಎಂ.ಸಿ ಸುರೇಂದ್ರ, ಚಾಮರಾಜನಗರ ವೈಲ್ಡ್ ಲೈಫ್ ಸಿಸಿಎಫ್ ಈರಲಾಲ, ವನ್ಯಜೀವಿ ಪರಿಪಾಲಕರಾದ ಮಲ್ಲೇಶಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಂದಗೋಪಾಲ್, ವನೋದಯ ಸ್ವಯಂ ಸೇವಕರ ತಂಡ ಅನ್ವಿನ್ ಕುಮಾರ್, ಮಹೇಶ್, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕ ಮತ್ತಿತರರು ಇದ್ದರು.