ಮರಿತಿಬ್ಬೇಗೌಡರಿಗೆ ಮತ ನೀಡುವಂತೆ ವಿಜಯರಾಮೇಗೌಡ ಮನವಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.01: ಸತತ ನಾಲ್ಕು ಬಾರಿ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿ ನೌಕರರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಛಲದಂಕಮಲ್ಲನಂತೆ ಶ್ರಮಿಸುತ್ತಿರುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದು ಮಿತ್ರ ಫೌಂಡೇಶನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್‍ರಾಮೇಗೌಡ ಕರೆ ನೀಡಿದರು.
ಅವರು ಪಟ್ಟಣದಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರನ್ನು ಭೇಟಿಮಾಡಿ ಮತಯಾಚನೆ ಮಾಡಿ ಮಾತನಾಡಿದರು.
ಇದೇ ಜೂನ್ ಮೂರರಂದು ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಸ್ಪರ್ದೆ ಮಾಡಿದ್ದು ಕಳೆದ 20 ವರ್ಷಗಳಿಂದ ಶಿಕ್ಷಕರೊಂದಿಗೆ ಉತ್ತಮ ಭಾಂದ್ಯವ್ಯವನ್ನು ಹೊಂದಿದ್ದಾರೆ. ಸದನದ ಒಳಗೆ ಹಾಗೂ ಹೊರಗೆ ಶಿಕ್ಷಕರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ದನಿಯಾಗಿ ಬದ್ದತೆಯಿಂದ ಕೆಲಸ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿರುವ ವಿವೇಕಾನಂದರವರು ಹಣದಿಂದ ಚುನಾವಣೆ ಗೆಲ್ಲಬಹುದು ಎಂದು ಭಾವಿಸಿದ್ದಾರೆ. ಅವರಿಗೆ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಆಳ, ಅಗಲ ಗೊತ್ತಿಲ್ಲ. ಅಂಥಹವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ಪ್ರಜ್ಞಾವಂತ ಮತದಾರರಾದ ನೀವುಗಳು ಹಣಕ್ಕೆ ಆಸ್ಪದ ನೀಡದೇ ಹಗಲಿರುಳು ಶಿಕ್ಷಕರ ಸಮಸ್ಯೆಗಳಿಗೆ ಪ್ರತಿನಿಧಿಯಾಗಿ ಕೆಲಸ ಮಾಡುವ ಮರಿತಿಬ್ಬೇಗೌಡರನ್ನು ಬೆಂಬಲಿಸಬೇಕು. ಪ್ರತಿಯೊಂದು ಸಮಸ್ಯೆಗಳಿಗೂ ಒಂದು ಪರಿಹಾರಗಳಿರುತ್ತವೆ. ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ಇಚ್ಛಾಶಕ್ತಿಯುಳ್ಳ ನಾಯಕರನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಶೈಕ್ಷಣಿಕ ಸಮಸ್ಯೆಗಳನ್ನು ಹೊಕ್ಕಿ ಪರಿಹಾರ ಕೊಡಿಸುವ ನಾಯಕರನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಉಪನ್ಯಾಸಕರ ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರಿತಿರುವ ಅಭ್ಯರ್ಥಿಗಳ ಪೈಕಿ ಮರಿತಿಬ್ಬೇಗೌಡರು ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಕಾಂಗ್ರೆಸ್ ಪಕ್ಷ ಶೋಷಿತರ, ಬಡವರ, ಅಲ್ಪಸಂಖ್ಯಾತರ ಪರವಾಗಿರುವ ಪಕ್ಷ. ಸಿದ್ದರಾಮಯ್ಯನವರ ಸರ್ಕಾರ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಿದೆ. ಗುರುಗಳು ಸಮಾಜದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದ್ದಾರೆ. ಅವರಿಗೆ ಹೆಚ್ಚಿನ ಅನುಕೂಲಗಳು ಸಿಗಬೇಕು ಆ ನಿಟ್ಟಿನಲ್ಲಿ ಮರಿತಿಬ್ಬೇಗೌಡ ಹೋರಾಟ ನಡೆಸಿಕೊಂಡು ಬಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಕಾಂಗ್ರೆಸ್ ಮುಖಂಡರಾದ ಮತ್ತಿಘಟ್ಟ ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಎಂ.ಜೆ.ಶಶಿಧರ ಮಾತನಾಡಿ ಮರಿತಿಬ್ಬೇಗೌಡರ ಪರ ಮತಯಾಚಿಸಿದರು.
ಉಪನ್ಯಾಸಕ ಜೆ.ಜಿ.ರಾಜೇಗೌಡ, ಬಡ್ತಿ ಉಪನ್ಯಾಸಕರ ಸಂಘದ ರಾಜ್ಯಾದ್ಯಕ್ಷ ರಮೇಶ್, ತಾಲ್ಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಆರ್.ವೆಂಕಟೇಶ್ ಸೇರಿದಂತೆ ಹಲವರಿದ್ದು ಶಿಕ್ಷಣಕ್ಷೇತ್ರದ ಸಮಸ್ಯೆಗಳನ್ನು ಕಾಂಗ್ರೆಸ್ ಮುಖಂಡರ ಮುಂದೆ ಅನಾವರಣ ಮಾಡಿದರು.