ಮಕ್ಕಳ ಬೆಳವಣಿಗೆಯಲ್ಲಿ ಪಾಲಕ-ಪೋಷಕರ ಪಾತ್ರ ಪ್ರಮುಖ
ಕಲಬುರಗಿ:ಮೇ.31:ಮಕ್ಕಳನ್ನು ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿಸಿ, ಸಮಾಜದ ದೊಡ್ಡ ಆಸ್ತಿಯನ್ನಾಗಿಸುವಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ. ಮಕ್ಕಳು ತಮ್ಮ ಪಾಲಕ-ಪೋಷಕರ ಶ್ರಮ ಮರೆಯಬಾರದು. ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಕಳಿಸಬೇಡಿ ಎಂದು ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್.ನಗರದ ‘ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಜಾಗತಿಕ ಪಾಲಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ತನಗಾಗಿ ಏನನ್ನು ಪ್ರಾರ್ಥಿಸದ ತಾಯಿ, ತನಗಾಗಿ ಏನನ್ನು ಮಾಡಿಕೊಳ್ಳದ ತಂದೆ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸುವ ಮುಗ್ದ ಜೀವಿಗಳು. ಮಗುವಿಗೆ ಶಿಕ್ಷಣ, ಸಂಸ್ಕಾರ, ಬುದ್ಧಿಯನ್ನು ನೀಡಿ, ವ್ಯಕ್ತಿಯನ್ನು ಶಕ್ತಿಯನ್ನಾಗಿಸುವಲ್ಲಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಾರೆ. ಮಕ್ಕಳು ತಮ್ಮ ಪಾಲಕರ ಮಾತುಗಳನ್ನು ಆಲಿಸಿ, ಮುನ್ನೆಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಶಿಕ್ಷಕರಾದ ಸೈಯದ್ ಹಮೀದ್, ಐಶ್ವರ್ಯ ಬಿರಾದಾರ, ಪೂಜಾ ಜಮಾದಾರ, ನಿಲೊಫರ್ ಶೇಖ್, ಪೂಜಾ ಹೂಗಾರ, ಪ್ರಮುಖರಾದ ಪೂರ್ಣಿಮಾ ದೇಸಾಯಿ, ಶಿವಾನಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.