ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಎಸ್‌ಐಟಿ ರಚಿಸಿದ ಸರ್ಕಾರ
ಬೆಂಗಳೂರು, ಮೇ.31-ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಹಾಗೂ ನಿಗಮದಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಗಳ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ಆದೇಶಿದೆ.
ಸಿಐಡಿಯ ಅಪರ ಪೊಲೀಸ್‌ ನಿರ್ದೇಶಕ ಮನೀಷ್‌ ಖರ್ಬೀಕರ್‌ ಅವರನ್ನು ವಾಲ್ಮೀಕಿ ನಿಗಮದ ತನಿಖೆಗೆ ರಚಿಸಿರುವ ಎಸ್‌ಐಟಿಗೆ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
ಬೆಂಗಳೂರು ನಗರದ ಸಂಚಾರ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು, ರಾಜ್ಯ ಗುಪ್ತವಾರ್ತೆಯ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹಾಗೂ ಸಿಐಡಿಯ ಪೊಲೀಸ್ ಅಧೀಕ್ಷಕ ರಾಘವೇಂದ್ರ ಕೆ ಹೆಗಡೆ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ.
ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್‌ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮೇ 26ರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ತನ್ನ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದವರ ಹೆಸರನ್ನು ಉಲ್ಲೇಖಿಸಿದ್ದರು.