ರಸ್ತೆಯಲ್ಲಿ ಸಂಗ್ರಹಿಸಿದ ಕಟ್ಟಡಸಾಮಗ್ರಿ ತೆರವಿಗೆ ಲೋಕಾಯುಕ್ತ ಎಸ್‍ಪಿ ಸೂಚನೆ
ಕಲಬುರಗಿ,ಮೇ 31: ನಗರದ ವಾರ್ಡ್ ಸಂಖ್ಯೆ 48ರ ಐವಾನ್ ಇ ಶಾಹಿ ಪ್ರದೇಶದಲ್ಲಿ ನೂತನ ಮನೆಯೊಂದರ ನಿರ್ಮಾಣದ ಸಾಮಗ್ರಿಗಳನ್ನು ರಸ್ತೆಯ ಮೇಲೆ ಸಂಗ್ರಹಿಸಿದ್ದನ್ನು ಕಂಡ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ ಪ್ರಸಂಗ ನಡೆದಿದೆ.
ಕರ್ನಾಟಕ ಲೋಕಾಯುಕ್ತ ಎಸ್‍ಪಿ ಜಾನ್ ಅಂತೋನಿ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳನ್ನು ಕರೆಸಿ ಕಟ್ಟಡ ಸಾಮಗ್ರಿಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಿಸಿ ಎಂದು ಸೂಚಿಸಿದರು.
ಸಾರ್ವಜನಿಕರು ಬಳಸುವ ರಸ್ತೆ ಮೇಲೆ ಮರಳು,ಕಬ್ಬಿಣ, ಇಟ್ಟಂಗಿ ಮತ್ತು ಕಂಕರ್ ಇನ್ನಿತರ ವಸ್ತುಗಳನ್ನು ಹಾಕಲಾಗಿತ್ತು .ಜೆಲ್ಲಿ ಮತ್ತು ಉಸುಕಿನಿಂದ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕಲಬುರಗಿ ನಗರದಲ್ಲಿ ನಡೆಯುತ್ತಿವೆ. ಮುಂದೆ ಏನಾದರೂ ಅನಾಹುತವಾದರೆ ಮಹಾನಗರ ಪಾಲಿಕೆಯ ಅಧಿಕಾರಿಗಳೇ ಜವಾಬ್ದಾರರು ಎಂದು ಎಚ್ಚರಿಕೆ ನೀಡಿದರು. ಇನ್‍ಸ್ಪೆಕ್ಟರ್ ರಾಜಶೇಖರ್ ಹಳಿಗೋಧಿ. ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಶಾಂತಾಕುಮಾರ ,ಕ್ವಾಲಿಟಿ ಅಧಿಕಾರಿ ರಾಜಕುಮಾರ್, ಸಿದ್ದರಾಮ ಬಿರಾದರ್ ಉಪಸ್ಥಿತರಿದ್ದರು.