ಸಂಗೀತ ಮಹೋತ್ಸವ ಕಾರ್ಯಕ್ರಮ
ಹುಬ್ಬಳ್ಳಿ,ಸೆ.24: ಗುರುವರ್ಯ ದಿ.ಶ್ರೀ ಸವಾಯಿ ಗಂಧರ್ವರ 72 ನೇ ಪುಣ್ಯತಿಥಿಯ ನಿಮಿತ್ತ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ಕುಂದಗೋಳದ ಸಂಗೀತ ಸಾಮ್ರಾಟ್ ಸವಾಯಿ ಗಂಧರ್ವ ಭವನದಲ್ಲಿ ಸೆಪ್ಟೆಂಬರ್ 26 ಹಾಗೂ 27 ರಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆಯ ಚೇರ್ಮನ್ ಅರವಿಂದ್ ಎಂ. ಕಟಗಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಸಂಗೀತೋತ್ಸವದ ಉದ್ಘಾಟನೆಯ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅರವಿಂದ್ ಕಟಗಿ ಅವರು ವಹಿಸಲಿದ್ದು, ಉದ್ಘಾಟನೆಯನ್ನು ರಾಜ್ಯಸಭಾ ಸದಸ್ಯರು ಪದ್ಮಶ್ರೀ ಸುಧಾ ಮೂರ್ತಿಯವರು ಹಾಗೂ ಸಚಿವರಾದ ಸಂತೋಷ್ ಲಾಡ್ ಅವರು ನೆರವೇರಿಸಲಿದ್ದಾರೆಂದರು.
ಸವಾಯಿ ಗಂಧರ್ವ ರಾಷ್ಟ್ರೀಯ ಪುರಸ್ಕಾರವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಭಾರತರತ್ನ ಪಂ. ಭೀಮಸೇನ್ ಜೋಶಿ ಅವರ ಪುತ್ರ ಪಂ. ಶ್ರೀನಿವಾಸ ಜೋಶಿ ಅವರಿಗೆ ಪ್ರದಾನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕರಾದ ಎಂ.ಆರ್.ಪಾಟೀಲ್, ಮಾಜಿ ಸಂಸದ ಐ.ಜಿ.ಸನದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೆಕ್ಕೇರಿ ಸೇರಿದಂತೆ ಮೊದಲಾದವರು ಆಗಮಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಂ.ಎನ್.ನಾಡಿಗೇರ್, ಅಶೋಕ ನಾಡಗೇರ್, ಆರ್.ಐ.ಬ್ಯಾಹಟ್ಟಿ ಉಪಸ್ಥಿತರಿದ್ದರು.