ಹರಿಹರಕ್ಕೆ ಹೆಚ್ಚಿನ ಪೌರಕಾರ್ಮಿಕರ ಮಂಜೂರಾತಿಗೆ ಸರ್ಕಾರಕ್ಕೆ ಒತ್ತಡ ತರುತ್ತೇನೆ ; ಶಾಸಕ ಹರೀಶ್
ಸಂಜೆವಾಣಿ ವಾರ್ತೆ
ಹರಿಹರ .ಸೆ.24;  ನಗರದ ಸ್ವಚ್ಛತೆಯ ಒತ್ತಡ ನಿವಾರಣೆಗೆ ಹೆಚ್ಚಿನ ಪೌರಕಾರ್ಮಿಕರ ಮಂಜೂರಾತಿಗೆ ಸರ್ಕಾರಕ್ಕೆ ಒತ್ತಡ ತರುತ್ತೇನೆ ಎಂದು ಶಾಸಕ ಬಿ.ಪಿ.ಹರೀಶ್ ಭರವಸೆ ನೀಡಿದರು.ನಗರದ ಗುರುಭವನದಲ್ಲಿ ಪೌರಾಡಳಿತ ನಿರ್ದೇಶನಾಲಯದ ಸರ್ಕಾರಿ ಆದೇಶದ ಮೇರೆಗೆ ನಗರಸಭೆಯಿಂದ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಗರಸಭೆಯ ವ್ಯಾಪ್ತಿಗೆ ಇತ್ತೀಚೆಗೆ ಕೆಲ ಗ್ರಾಮ ಮತ್ತು ಹೊಸ ಬಡಾವಣೆಗಳು ಸೇರ್ಪಡೆ ಯಾಗಿದ್ದು, ಹರಿಹರದ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಪೌರಕಾರ್ಮಿಕ ಸಿಬ್ಬಂದಿಯನ್ನು ಮಂದೂರಾತಿ ಮಾಡಿಸಲು ಸರ್ಕಾರದೊಂದಿಗೆ ಸರ್ವ ಪ್ರಯತ್ನಿಸಿ ಒತ್ತಡ ತರುತ್ತೇನೆ ಎಂದು ಹೇಳಿದರು. ಪೌರಕಾರ್ಮಿಕರ ಕೆಲಸವೆಂದರೆ ಅದು ಊರಿನ ಸ್ವಚ್ಛತೆಯ ಕೆಲಸ ಅವರು ಬೆಳ್ಳಂ ಬೆಳಗ್ಗೇನೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ಊರಿನ ಬೀದಿ ಬೀದಿಗಳನ್ನು ಸ್ವಚ್ಛಗೊಳಿಸುತ್ತಾರೆ. ಊರಿನ ಜನರೆಲ್ಲ ಹಬ್ಬ ಹರಿದಿನ ಆಚರಣೆ ಮಾಡಿದರೆ ಅವರಿಗೆ ಹಬ್ಬ ಹರಿದಿನಗಳಲ್ಲಿ ಎರಡರಷ್ಟು ಕಷ್ಟದ ಕೆಲಸವಿರುತ್ತದೆ.ಹಬ್ಬ ಆಚರಣೆ ಮಾಡಿದ ಮನೆಗಳ ತಳಿರು ತೋರಣಗಳ ಕಸ ಕಡ್ಡಿಗಳ ವಿಲೇವಾರಿ ಮಾಡುವುದು ಅವರಿಗೆ ತುಂಬಾ ಕಷ್ಟಕರ ಕೆಲಸವಾಗಿರುತ್ತದೆ ಎಂದರು. ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಪಾತ್ರ ಅತ್ಯಮೂಲ್ಯವಾದದ್ದು.  ಎಂದು ಹೇಳಿದರು. ಇದೇ ವೇಳೆ ಪೌರಾಯುಕ್ತ ಪಿ.ಸುಬ್ರಹ್ಮಣ್ಯ ಶ್ರೇಷ್ಠಿ ಮಾತನಾಡಿ ಇಂದಿನ ಸಮಾರಂಭದಲ್ಲಿ ಬಹಳಷ್ಟು ಜನ ಪೌರಕಾರ್ಮಿಕರಿಗೆ ನಿವೇಶನ ಮನೆಗಳ ಹಂಚಿಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಈಗಿರುವ ಕೆಲವು ಜಮೀನುಗಳಲ್ಲಿ ಅಲ್ಲಿನ ನಿವಾಸಿಗಳು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ವಿಳಂಬವಾಗಿದೆ ಪ್ರಕರಣ ಬಗೆಹರಿದ ತಕ್ಷಣ ನಿವೇಶನಗಳನ್ನು ವಿತರಣೆ ಮಾಡುವ ಕೆಲಸ ಮಾಡಲಾಗುವುದು ಇದಕ್ಕೆ ನಮ್ಮ ಶಾಸಕರ ಸಹಕಾರವನ್ನು ಸಹ ಪಡೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.