ಉಪನ್ಯಾಸ ಕಾರ್ಯಕ್ರಮ
ಧಾರವಾಡ.ಸೆ.24: ಪ್ರೊ. ಸದಾನಂದ ಕನವಳ್ಳಿ ಬಹುಮುಖ ವ್ಯಕ್ತಿತ್ವದ ಅನನ್ಯ ಸಾಧಕರು, ಸಂಸ್ಕøತಿಯ ಪರಿಚಾರಕರೂ ಆಗಿದ್ದರು ಎಂದು ಬೆಳಗಾವಿ ಲಿಂಗರಾಜ ಕಾಲೇಜಿನ ಪ್ರಾಚಾರ್ಯ ಡಾ. ಹನುಮಂತ ಮೇಲಿನಮನಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸದಾನಂದ ಕನವಳ್ಳಿ ಸ್ಮರಣಾರ್ಥ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ. ಸದಾನಂದ ಕನವಳ್ಳಿಯವರ ಬಹುಮುಖ ವ್ಯಕ್ತಿತ್ವ' ವಿಷಯ ಕುರಿತು ಮಾತನಾಡಿದರು. ಪ್ರೊ. ಸದಾನಂದ ಕನವಳ್ಳಿ ಓರ್ವ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿ ಕ್ರಿಯಾಶೀಲ ಸಂಘಟಕರಾಗಿದ್ದು ಕ್ರೀಡೆಗಳ ಬಗ್ಗೆ ಅತೀವ ಆಸಕ್ತಿ ಇತ್ತು. ದೇಶಿಯ ಕ್ರೀಡೆಗಳನ್ನು ಸಂಘಟಿಸಿ ಜನಮೆಚ್ಚುಗೆ ಪಡೆದರು. ಹಿಂದೂಸ್ಥಾನಿ ಗಾಯಕರನ್ನು ಕುರಿತಂತೆ ಮತ್ತು ಓಲಿಂಪಿಕ್ಸ್ ಕ್ರೀಡೆಗಳ ಬಗ್ಗೆ, ಮಹಾನ್ ಸಾಧಕರ ಜೀವನ ಚರಿತ್ರೆಯ ಬಗ್ಗೆ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ.
ಅವರುಮರೆತು ಹೋದ ವಿಜಯನಗರ’ ಎಂಬ ಅನುವಾದಿತ ಕೃತಿಯನ್ನು ಮನಮುಟ್ಟುವಂತೆ ಬರೆದಿದ್ದಾರೆ. ಪ್ರೊ. ಕನವಳ್ಳಿಯವರು ಕುಟುಂಬ ವತ್ಸಲರು. ತಮಗಿಂತ ಕಿರಿಯರನ್ನೂ ಸಹ ಗೌರವದಿಂದ ಕಾಣುತ್ತಿದ್ದರು. ಪರಿಸರ ಸ್ನೇಹಿಯಾಗಿ ಬಾಳಿದ ಅವರು ಅತಿಥಿ ಸತ್ಕಾರಕ್ಕೆ ಹೆಸರಾಗಿದ್ದರು. ಅವರ ಜೀವನ ಯಶೋಗಾಥೆ ನಮಗೆಲ್ಲಾ ಪ್ರೇರಣೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ವೀರಣ್ಣ ರಾಜೂರ ಮಾತನಾಡಿ, ಪ್ರೊ. ಸದಾನಂದ ಕನವಳ್ಳಿಯವರದು ಸಮಗ್ರ ವ್ಯಕ್ತಿತ್ವ. ಅವರಲ್ಲಿದ್ದ ಇಚ್ಚಾಶಕ್ತಿ ಅಗಾಧವಾದದ್ದು. ಪ್ರಾಮಾಣಿಕತೆ, ಬದ್ಧತೆಗೆ, ಕರ್ತವ್ಯನಿಷ್ಠತೆಗೆ ಹೆಸರಾಗಿದ್ದರು. ಅವರ ಸಮಗ್ರ ಸಾಹಿತ್ಯ ಸಂಪುಟ ಪ್ರಕಟವಾಗಬೇಕು. ಅವರ ಹೆಸರಿನ ಟ್ರಸ್ಟ್ ಪ್ರಾರಂಭಿಸಿ ಕ್ರಿಯಾಶೀಲವಾದ ರಚನಾತ್ಮಕ ಕಾರ್ಯ ಮುಂದುವರಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ದತ್ತಿದಾನಿ ವಿರೇಶ ಕನವಳ್ಳಿ ಇದ್ದರು.
ಪ್ರೊ. ಸದಾನಂದ ಕನವಳ್ಳಿಯವರ ಪುತ್ರಿ ಸರಿತಾ ಮಹೇಶ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಗುರು ಹಿರೇಮಠ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ., ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಡಾ. ಶಿವಾನಂದ ಶೆಟ್ಟರ ಸೇರಿದಂತೆ ಕನವಳ್ಳಿ ಅವರ ಅಭಿಮಾನಿಗಳು, ಪರಿವಾರದವರು ಕಾರ್ಯಕ್ರಮದಲ್ಲಿ ಇದ್ದರು.