ಕಲಾಭವನ ನಿರ್ಮಾಣಕ್ಕೆ ಜಮೀನು ನೀಡಲು ಮನವಿ
ಬೆಂಗಳೂರು, ಸೆ. ೨೪- ನಗರದ ವೈಯಾಲಿಕಾವಲ್‌ನ ತೆಲುಗು ವಿಜ್ಞಾನ ಸಮಿತಿಯ ಪಕ್ಕದಲ್ಲಿರುವ ನಿವೇಶನವನ್ನು ಶ್ರೀ ಕೃಷ್ಣದೇವರಾಯ ಬಯಲು ರಂಗಮಂದಿರ, ಪದವಿ ಪೂರ್ವ ಕಾಲೇಜು, ಡಿಗ್ರಿ ಕಾಲೇಜು, ಶಾಲಾ ಆಟದ ಮೈದಾನ ಮತ್ತು ಕಲಾಭವನವನ್ನು ನಿರ್ಮಿಸಲು ಈ ನಿವೇಶನವನ್ನು ಸಮಿತಿ ನೀಡಬೇಕೆಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರವರಿಗೆ ತೆಲುಗು ವಿಜ್ಞಾನ ಸಮಿತಿಯ ಅಧ್ಯಕ್ಷ ಡಾ. ರಾಧಾಕೃಷ್ಣ ರಾಜುರವರು ಮನವಿ ಸಲ್ಲಿಸಿದರು.
ನಗರದ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ತೆರಳಿದ ಸಮಿತಿಯ ಸದಸ್ಯರು, ಅವರನ್ನು ಭೇಟಿ ಮಾಡಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ಪದ್ಮಭೂಷಣ ಡಾ. ಎ. ನಾಗೇಶ್ವರ ರಾವ್‌ರವರ ಶತಮಾನೋತ್ಸವ ಸಂದರ್ಭದಲ್ಲಿ ಅವರಿಗೆ ಸನ್ಮಾನಿಸಿ ಗೌರವಿಸಿ ಮನವಿ ಸಲ್ಲಿಸಲಾಯಿತು.
ಈ ಮನವಿಗೆ ಸ್ಪಂದಿಸಿದ ಡಿ.ಕೆ. ಶಿವಕುಮಾರ್‌ರವರು ಇದನ್ನು ಪರಿಶೀಲಿಸಿ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತೆಲುಗು ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಆದಿಕೇಶವ ನಾಯ್ಡು, ಖಜಾಂಚಿ ವರದರಾಜು, ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಯ್ಯರವರು ಉಪಸ್ಥಿತರಿದ್ದರು.