ಕೆಳದಿ ಅರಸರ ಕಾಲದ ಕನ್ನಡ ಶಾಸನ ರಕ್ಷಿಸಿದ ಕಾಶಿ ಜಗದ್ಗುರುಗಳು
ವಾರಾಣಸಿ: ಮೇ.31:ಕಾಶಿಯಲ್ಲಿ ನಿರ್ಲಕ್ಷ್ಯಕ್ಕೊಳಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನ ರಕ್ಷಣೆಗೆ ಕಾಶೀ ಪೀಠ ಸೂಕ್ತ ಕ್ರಮ ಕೈಗೊಂಡಿದೆ. ಇತ್ತೀಚೆಗೆ ಕಾಶಿಯಲ್ಲಿ ಕನ್ನಡ ಶಾಸನ ಒಂದನ್ನು ಬಟ್ಟೆ ತೊಳೆಯುವುದಕ್ಕೆ ಬಳಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಇದನ್ನು ಗಮನಿಸಿದ ಕಾಶೀ ಪೀಠದ ಜಗದ್ಗುರು ಡಾ . ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪೀಠದ ವ್ಯವಸ್ಥಾಪಕರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿ ಅದರ ರಕ್ಷಣೆಗೆ ಮುಂದಾಗಿದ್ದರು .
ಕಾಶೀ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಬೃಹತ್ ಸರೋವರದ ಬಳಿ ಕನ್ನಡದ ಶಾಸನವಿದ್ದು, ಕೆಳದಿ ರಾಜ ಶಿವಪ್ಪನಾಯಕರು ಜನರ ಅನುಕೂಲಕ್ಕೆ ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿತ್ತು.
ಸ್ಥಳೀಯರು ಇದರ ಮಹತ್ವ ಅರಿಯದೆ ಶಾಸನವನ್ನು ಸರೋವರದ ಮೇಲೆ ದಾಟುಗಲ್ಲಾಗಿ ಹಾಗೂ ಕೆಲವರು ಬಟ್ಟೆ ತೊಳೆಯಲು ಬಳಸುತ್ತಿದ್ದರು. ಇದನ್ನು ಪರಿಶೀಲಿಸಿದ ಕಾಶೀ ಜಗದ್ಗುರುಗಳು ಕಪಿಲಧಾರ ಗ್ರಾಮ ಪಂಚಾಯಿತಿ ಅಧಿಕಾರಿಯ ಗಮನಕ್ಕೆ ತಂದು ಸ್ವತ: ಕಾಶೀ ಪೀಠದ ಗುರುಕುಲದ ವಿದ್ಯಾರ್ಥಿಗಳೊಂದಿಗೆ ತೆರಳಿ ಶಾಸನವನ್ನು ಸರೋವರದ ಕಟ್ಟೆಯ ಮೇಲೆ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರ ಪ್ರದರ್ಶನಕ್ಕೆ ಕ್ರಮಕೈಗೊಂಡಿದ್ದಾರೆ.
ಹೊಸದಾಗಿ ಸ್ಥಾಪಿಸಿದ ಶಾಸನ ಶಿಲೆಗೆ ಪುಷ್ಪಮಾಲೆ ಹಾಕಿದ ಕಾಶೀ ಜಗದ್ಗುರುಗಳು ಸರೋವರದ ದಂಡೆಯ ಮೇಲಿರುವ ಪುರಾತನ ವೃಷಣಧ್ವಜೇಶ್ವರ ಮಹಾದೇವ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕನ್ನಡ ಶಾಸನ ರಕ್ಷಣೆ ವಿಷಯದಲ್ಲಿ ಕಾಶೀ ಜಗದ್ಗುರುಗಳ ಕಾರ್ಯ ಇತಿಹಾಸ ಪ್ರಿಯರು ಹಾಗೂ ಕನ್ನಡಿಗರ ಮೆಚ್ಚುಗೆಗೆ ಕಾರಣವಾಗಿದೆ.