ಮಕ್ಕಳ ಭದ್ರ ಬುನಾದಿಗೆ ಇಸಿಸಿಇ ಶಿಕ್ಷಣ ಪೂರಕ
ಭಾಲ್ಕಿ:ಮೇ.31: ಮಕ್ಕಳ ಭದ್ರ ಬುನಾದಿಗೆ (ಇಸಿಸಿಇ)ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ ಪೂರಕವಾಗಿದ್ದು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹಜರ ಹುಸೇನ್ ಹೇಳಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ 2024-25ನೆಯ ಸಾಲಿನ ಇಸಿಸಿಇ ಮತ್ತು ಎನ್‍ಎಸ್‍ಕ್ಯೂಎಫ್ ತರಗತಿ ಪ್ರಾರಂಭ ಕುರಿತು ಗುರುವಾರ ನಡೆದ ಮುಖ್ಯಗುರುಗಳ ಮತ್ತು ಬಿಆರ್‍ಪಿಗಳ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಕೆಆರ್‍ಡಿಬಿ) ಯೋಜನೆಯಡಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ತಾಲೂಕಿನ ಆಯ್ದ 14 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಸಿಸಿಇ ಮತ್ತು ಎರಡು ಸರಕಾರಿ ಪ್ರೌಢ ಶಾಲೆಗಳಲ್ಲಿ ಎನ್‍ಎಸ್‍ಕ್ಯೂಎಫ್ ತರಗತಿ ಪ್ರಾರಂಭಿಸಲಾಗುತ್ತಿದೆ. ಜೂ 1 ರಿಂದಲೇ ತರಗತಿ ಆರಂಭಗೊಳ್ಳುತ್ತಿವೆ.
ಆಯ್ದ ಶಾಲೆಗಳಲ್ಲಿ ತರಗತಿ ಪ್ರಾರಂಭಿಸಲು ಅನುದಾನದ ಲಭ್ಯತೆ ಇದ್ದು, ಮಕ್ಕಳ ಆಸನ, ಪಿಠೋಪಕರಣ ಖರೀದಿಗೆ ಬಳಸಿಕೊಳ್ಳಬೇಕು.
ಎಲ್‍ಕೆಜಿ ಮತ್ತು ಯುಕೆಜಿ ತರಗತಿಗೆ ಪ್ರತ್ಯೇಕ ಅತಿಥಿ ಶಿಕ್ಷಕ ಮತ್ತು ಸೇವಕಿ(ಆಯಾ)ಯರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿದ್ದು, ಸ್ಥಳೀಯವಾಗಿ ಎಸ್‍ಡಿಎಂಸಿ ಅಧ್ಯಕ್ಷರು, ಮುಖ್ಯಗುರುಗಳು ಸೇರಿ ಅರ್ಹತೆ ಆಧಾರದ ಮೇಲೆ ಶಿಕ್ಷಕರನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ತರಗತಿ ಆರಂಭದಿಂದಲೇ ಪರಿಣಾಮಕಾರಿ ಶಿಕ್ಷಣ ನೀಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಧಿಕಾರಿ ಮನೋಹರ ಹೋಳಕರ್, ಬಿಆರ್‍ಪಿಗಳಾದ ಮಹಾದೇವ ಮಾನಕಾರೆ, ಸಂತೋಷ ಮುದಾಳೆ, ಶಕುಂತಲಾ ಸಾಲಮನಿ, ಇಸಿಒ ಸಹಾದೇವ ಸೇರಿದಂತೆ ಸಿಆರ್‍ಪಿ, ಮುಖ್ಯಗುರುಗಳು ಭಾಗವಹಿಸಿದರು.