ಬಕ್ಕಪ್ಪ ಕೋಟೆ ಅವರಿಗೆ ಎಂಎಲ್‍ಸಿ ಮಾಡಿ: ರಾಜಕುಮಾರ ಟಿಳ್ಳೇಕರ್
ಬೀದರ್:ಮೇ.31: ಸುಮಾರು 35 ವರ್ಷಗಳಿಂದ ಕಾಂಗ್ರೇಸ್ ಪಕ್ಷಕ್ಕಾಗಿ ದುಡಿಯುತ್ತಿರುವ ಪಕ್ಷದ ಹಿರಿಯ ಮುಖಂಡರಾದ ಬಕ್ಕಪ್ಪ ಕೋಟೆಯವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಗರ್ಜನೆ ಅಧ್ಯಕ್ಷ ರಾಜಕುಮಾರ ಟಿಳ್ಳೇಕರ್ ಸರ್ಕಾರಕ್ಕೆ ಒತ್ತಾಯಿಸಿದರು.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜರುಗಿದ ಸುದ್ದಿಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಬಕ್ಕಪ್ಪ ಕೋಟೆಯವರು ಬೀದರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳನ್ನು ತೆರೆದು ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ವರ್ಷ ಶೇ. 30% ಪ್ರತಿಶತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಾರೆ. ದೇಶದಲ್ಲಿ ಕೋವಿಡ್ ಬಂದಾಗ ಜಿಲ್ಲೆಯಲ್ಲಿ ಬಡವರಿಗೆ ಉಚಿತ ಆಹಾರದ ಕಿಟ್‍ಗಳನ್ನು ವಿತರಣೆ ಮಾಡಿ ಸಮಾಜ ಸೇವೆ ಮಾಡಿದ್ದಾರೆ. ಹೀಗಾಗಿ ಸಿಎಂ ಸಿದ್ಧರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ ಹಾಗೂ ಗೃಹಸಚಿವರಾದ ಡಾ. ಜಿ.ಪರಮೆಶ್ವರ ಕೋಟೆಯವರ ಸೇವೆಯನ್ನು ಪರಿಗಣಿಸಿ ಅವರಿಗೆ ಎಂಎಲ್‍ಸಿ ಮಾಡಬೇಕೆಂದು ಕರೆ ನೀಡಿದರು.
ಬಕ್ಕಪ್ಪ ಕೋಟೆಯವರು ವಡ್ಡರ ಕಾಲೋನಿಯ ಹಾಗೂ ಬುರ್‍ಬುರೆ ಜನಾಂಗದವರಿಗೆ ಸಾಕಷ್ಟು ಸಹಾಯಹಸ್ತ ಚಾಚಿರುವುದು ಮಾದರಿ ಎನಿಸಿದೆ. ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಹಲವಾರು ಜನರಿಗೆ ಉದ್ಯೋಗ ಒದಗಿಸಿ ಬಡವರ ಬಂಧು, ದೀನ ದುರ್ಬಲರ ಆಶಾಕಿರಣರಾಗಿದ್ದಾರೆ. ಹೀಗಾಗಿ ಅವರಿಗೆ ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿದರೆ, ಸಾಕಷ್ಟು ಜನಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ತೋರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ರಾಜಕುಮಾರ ಟಿಳ್ಳೆಕರ್ ಪ್ರತಿಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಗಜಸೇನೆ ಜಿಲ್ಲಾಧ್ಯಕ್ಷ ಅಮೃತ ಮುತ್ತಂಗಿಕರ್, ಪ್ರಮುಖರಾದ ಕೇತನ ಪಾಟೀಲ, ರಾಜಕುಮಾರ ಸೋನೆ, ಶಾಮ ಭಾವಿಕಟ್ಟಿ, ದಿನೇಶ ಡೊಂಗರಗಿ, ಸುನೀಲ ಚಂದಾ, ಅವಿನಾಶ ಬುಧೇರಾಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಆರು ವರ್ಷ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರೂ ಅರವಿಂದಕುಮಾರ ಅರಳಿ ಸರ್ಕಾರದಿಂದ ಯಾವುದೇ ಅನುದಾನ ತಂದು ಹೇಳಿಕೊಳ್ಳುವಂಥ ಕೆಲಸ ಮಾಡಿಲ್ಲ. ರಸ್ತೆ, ಕಾಲುವೆ ಸೇರಿದಂತೆ ಇನ್ನಿತರ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಜನತೆಗೆ ಒದಗಿಸಿಲ್ಲ. ಏಕೆಂದರೆ ನಾವು ಅವರು ವಾಸಿಸುವ ಓಣಿಯಲ್ಲೇ ವಾಸಿಸುತ್ತೇವೆ. ಹೀಗಾಗಿ ಜನತೆಗೆ ಅವರ ಕೊಡುಗೆ ಶೂನ್ಯ ಎಂದು ಮುಖಂಡರಾದ ಅವಿನಾಶ ಬುಧೇರಾಕರ್ ತಿಳಿಸಿದರು. ಬಕ್ಕಪ್ಪ ಕೋಟೆಯವರು ಅರ್ಧರಾತ್ರಿಗೂ ಬಡವರ ಕಷ್ಟಗಳಿಗೆ ಸ್ಪಂದಿಸುತ್ತಾರೆ. ಆದ್ದರಿಂದ ಈ ಬಾರಿ ಅವರಿಗೆ ಎಂಎಲ್‍ಸಿ ಮಾಡಬೇಕೆಂದು ಕಾಂಗ್ರೇಸ್ ಹೈಕಮಾಂಡ್‍ಗೆ ಕೋರಿದರು.