ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರಕ್ಕೆ ಚಾಲನೆ
ಬೀದರ:ಮೇ.31:ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟ ಅಡಿಯಲ್ಲಿ ಬರುವ ತೋಟಗಾರಿಕೆ ಮಹಾವಿದ್ಯಾಲಯ, ಬೀದರನ ಅಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಮೂರು ತಿಂಗಳ ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರವನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನೋಳಿ ಗ್ರಾಮದಲ್ಲಿ ದಿನಾಂಕ: 29.05.2024 ರಂದು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ, ಈ ಶಿಬಿರದಲ್ಲಿ ಐದು (ಐನೋಳಿ, ಕೋಳ್ಳೂರು, ಆಣಾವರ, ದೇಗಲಮಡಿ ಮತ್ತು ಚಿಮ್ಮಾ-ಇದಲಾಯಿ) ಗ್ರಾಮಗಳನ್ನು ದತ್ತು ಪಡೆದುಕೊಂಡು ವಿದ್ಯಾರ್ಥಿಗಳು ಮೂರು ತಿಂಗಳು ಗ್ರಾಮದಲ್ಲಿ ವಾಸ್ತವ್ಯ ಮಾಡಿ ರೈತರ ಅನುಭವವನ್ನು ಪಡೆಯಲು ಮತ್ತು ರೈತರಿಗೆ ವೈಜ್ಞಾನಿಕವಾಗಿ ಮಾಹಿತಿ ನೀಡಲು ಈ ಶಿಬಿರದ ಮೂಲ ಉದ್ದೇಶವಾಗಿರುತ್ತದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಡಾ: ಶಶಿಕಲಾ ಎಸ್. ರೂಳಿ ಸಹಾಯಕ ಪ್ರಾಧ್ಯಾಪಕರು (ಕೃಷಿ ವಿಸ್ತರಣಾ) ತಿಳಿಸಿದರು.
ಉದ್ಘಾಟಕರಾಗಿ ಆಗಮಸಿದ ಶ್ರೀಮತಿ ಕಮಲಾಬಾಯಿ ಸೇವು ಪವಾರ, ಅಧ್ಯಕ್ಷರು, ಗ್ರಾಮ ಪಂಚಾಯತ್, ಐನೋಳಿ ಇವರು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ತಮ್ಮ ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿ ಇಟ್ಟುಕೊಂಡು ಯಶಸ್ವಿಯಾಗಲು ಶ್ರಮಿಸಬೇಕು. ವಿದ್ಯಾರ್ಥಿಗಳು ಮತ್ತು ರೈತರ ನಡುವೆ ಸಲಹೆ-ಸೂಚನೆಗಳ ಸಮಾಲೋಚನೆಯ ಮೂಲಕ ಪರಸ್ಪರ ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಳ್ಳಲು ಇದೊಂದು ಸದಾವಕಾಶವೆಂದು ಹೇಳಿದರು.