ರೈತರ ಬಾಕಿ ಹಣ ನೀಡಲು ಆಯುಕ್ತರಿಗೆ ಮನವಿ
ಅಫಜಲಪುರ:ಮೇ.31: ತಾಲ್ಲೂಕಿನ ಚಿಣಮಗೇರಾ ಗ್ರಾಮದ ಕೆ.ಪಿ.ಆರ್ ಸಕ್ಕರೆ ಕಾರ್ಖಾನೆ ಹಾಗೂ ನೆರೆಯ ಆಲಮೇಲ ತಾಲೂಕಿನ ಕೆ.ಪಿ.ಆರ್. ಸಕ್ಕರೆ
ಕಾರ್ಖಾನೆಗಳು 2022-23 ನೇ ಸಾಲಿನಲ್ಲಿ ಒಟ್ಟು 16 ಕೋಟಿ ರೂ. ಬಾಕಿ ಹಣ ರೈತರ ಖಾತೆಗೆ ಸಂದಾಯ ಮಾಡದೆ ಮೋಸ ಮಾಡುತ್ತಿದ್ದು ಕೂಡಲೇ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ ಹೂಗಾರ ಅವರು ಬೆಂಗಳೂರಿನ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಈಗಾಗಲೇ ಹವಳಗಾ ರೇಣುಕಾ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ 2550 ರೂ. ರೈತರ ಖಾತೆಗೆ ಸಂದಾಯ ಮಾಡಿದ್ದಾರೆ. ಪ್ರತಿ ವರ್ಷ ಎರಡು ಕಾರ್ಖಾನೆಗಳು ಒಂದೇ ದರ ನೀಡುತ್ತಾರೆ ಎಂದು ಯಾವುದೇ ಅನುಮಾನ ಇಲ್ಲದೆ ರೈತರು ಕಬ್ಬು ಪೂರೈಸಿದ್ದಾರೆ. ಆದರೆ ಕೆಪಿಆರ್ ಸಕ್ಕರೆ ಕಾರ್ಖಾನೆಯು 2500 ರೂ. ಪ್ರತಿ ಟನ್ ಕಬ್ಬಿಗೆ ಸಂದಾಯ ಮಾಡಿ ಉಳಿದ 50 ರೂ. ಬಾಕಿ ಹಣ ನೀಡದೆ ಮೋಸ ಮಾಡಿದ್ದಾರೆ. ಹೀಗಾಗಿ ಕೂಡಲೇ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು ರೈತರ ನೆರವಿಗೆ ನಿಲ್ಲಬೇಕು ಎಂದು ಆಗ್ರಹಿಸಿದ ಅವರು ನಮ್ಮ ಬೇಡಿಕೆ ಈಡೇರದೆ ಇದ್ದರೆ ರೈತರೊಂದಿಗೆ ಕೂಡಿ ಉಗ್ರವಾದ ಹೋರಾಟದ ಮೂಲಕ ಕಾರ್ಖಾನೆ ಆರಂಭಿಸಲು ಬಿಡುವುದಿಲ್ಲ ಎಂದು ಮುನ್ನೆಚ್ಚರಿಕೆ ನೀಡಿದರು.