ಸಾರ್ವಜನಿಕ ಆರೋಗ್ಯಕ್ಕೆ ಆಧ್ಯತೆ ನೀಡಿ: ಜಿಲ್ಲಾಧಿಕಾರಿ

ಧಾರವಾಡ, ಮೇ.31: ಮಳೆಗಾಲ ಆರಂಭವಾಗುತ್ತಿದ್ದು, ಆರೋಗ್ಯ ಇಲಾಖೆ ಮತ್ತು ಇತರ ಇಲಾಖೆಗಳು ಸಮನ್ವಯದಿಂದ ಕಾರ್ಯ ಮಾಡಿ, ಸಾಂಕ್ರಾಮಿಕ ರೋಗಗಳ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು, ಸಾರ್ವಜನಿಕ ಆರೋಗ್ಯ ಸುರಕ್ಷತೆಗೆ ಆಧ್ಯತೆ ನೀಡಿ. ಜಲಜನ್ಯ ಮತ್ತು ಕೀಟ ಜನ್ಯ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿ. ಯಾವುದೇ ಇಲಾಖೆ ಅಧಿಕಾರಿಗಳ ನಿಲಕ್ಷ್ರ್ಯದಿಂದ ರೋಗ, ರುಜೀನ ಹೆಚ್ಚಿದರೆ ಅಂತವರ ವಿರುದ್ದ ಸಾರ್ವಜನಿಕ ಆರೋಗ್ಯ ರಕ್ಷಣೆ ಕಾಯ್ದೆಯಡಿ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕಳೆದ ಜನವರಿಯಿಂದ ಏಪ್ರೀಲ್‍ವರೆಗೆ ಸುಮಾರು 451 ವಾಂತಿಭೇದಿ ಪ್ರಕರಣಗಳು ವರದಿಯಾಗಿವೆ. ಮಳೆಗಾಲದಲ್ಲಿ ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರವಹಿಸಿ. ಕಾಲಕಾಲಕ್ಕೆ ಕುಡಿಯುವ ನೀರನ್ನು ಸರಬರಾಜು ಆರಂಭ ಮತ್ತು ಬಳಕೆಯ ಕೊನೆಯ ಸ್ಥಳದಲ್ಲಿ ಪೆÇ್ರಟೊಕಾಲ್ ಪ್ರಕಾರ ಪರೀಕ್ಷೆ ಮಾಡಬೇಕು. ಇದಕ್ಕೆ ಆರೋಗ್ಯ ಇಲಾಖೆಗೆ ಸ್ಥಳೀಯ ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.
ನೀರು ಅಮೂಲ್ಯವಾದದ್ದು, ಜನರಿಗೆ ಸ್ವಚ್ಛ, ಸುರಕ್ಷೀತ ನೀರು ಕೊಡುವುದು ನಮ್ಮ ಕರ್ತವ್ಯ. ನಗರ ಹಾಗೂ ಗ್ರಾಮಗಳಲ್ಲಿ ಇರುವ ಎಲ್ಲ ನೀರಿನ ಟ್ಯಾಂಕ್‍ಗಳನ್ನು ಮಳೆಗಾಲ ಪೂರ್ವದಲ್ಲಿ ಸ್ವಚ್ಛಗೊಳಿಸಿ. ಸಣ್ಣಪುಟ್ಟ ದುರಸ್ತಿಗಳಿದ್ದರೆ ಮಾಡಿ. ಈ ಕುರಿತು ಸರ್ವೆ ಮಾಡಿ. ಯಾವ ಸ್ಥಳದಲ್ಲಿಯೂ ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾನ್ಸೂನ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಮತ್ತು ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯು, ಚಿಕನ್‍ಗುನ್ಯ, ಮೆದುಳಜ್ವರ ನಿಯಂತ್ರಣಕ್ಕಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಸಾರ್ವಜನಿಕ ಆರೋಗ್ಯ ಇಂಜಿನಿಯರಿಂಗ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ನೀರಾವರಿ ಇಲಾಖೆ, ಕಂದಾಯ, ವಾರ್ತಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಹಾನಗರ ಪಾಲಿಕೆ ವರದಿ ಪ್ರಕಾರ ಅವಳಿನಗರದಲ್ಲಿ ಬೀದಿ ನಾಯಿಗಳು ಹೆಚ್ಚಾಗಿವೆ. ಕಳೆದ ವರ್ಷ ನಾಯಿ ಕಡಿತಕ್ಕೆ ಅನೇಕ ಜನ ಒಳಗಾಗಿದ್ದಾರೆ. ಇದನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಬೇಕು. ಶ್ವಾನ ಪಾಲನಾ ಕೇಂದ್ರಗಳಿಗೆ ನೀಡಬೇಕು ಮತ್ತು ಶ್ವಾನ ದತ್ತು ಯೋಜನೆ ಮೂಲಕ ಅಗತ್ಯವಿರುವ ನಾಗರಿಕರಿಗೆ ನಾಯಿ ಮರಿಗಳನ್ನು ಸಾಕಲು ಉಚಿತವಾಗಿ ನೀಡಬೇಕು. ಮುಂದಿನ ಮೂರು ತಿಂಗಳಲ್ಲಿ ಈ ಕುರಿತು ಕೈಗೊಂಡ ವರದಿಯನ್ನು ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಧಾರವಾಡ ಜಿಲ್ಲೆಯ ಕುಡಿಯುವ ನೀರಿನ ಮೂಲಗಳ ಮಾಹಿತಿ:* ಆರೋಗ್ಯ ಇಲಾಖೆ ಸಮೀಕ್ಷೆ ಕೈಗೊಂಡಿರುವ ಕುಡಿಯುವ ನೀರಿನ ಮೂಲಗಳ ವ್ಯಾಪ್ತಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟು 52 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಈ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪೆÇ್ರಟೊಕಾಲ್ ಪ್ರಕಾರ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ. ಹಾಗೂ ಅದೇ ರೀತಿಯಲ್ಲಿ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿಯೂ ಕುಡಿಯುವ ನೀರಿನ ಪರೀಕ್ಷೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರವಾಹವು ಸಾರ್ವಜನಿಕರ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬಿರುವುದರಿಂದ, ಪ್ರವಾಹ ಕಾಲದಲ್ಲಿ ಮತ್ತು ಪ್ರವಾಹ ನಂತರ ಉಂಟಾಗಬಹುದಾದ ಅತಿಸಾರ ಭೇದಿ ಮತ್ತು ಕಾಲರಾ, ಕರಳುಬೇನೆ ಪ್ರಕರಣಗಳನ್ನು ಗುರುತಿಸಲು ಮತ್ತು ನಿಯಂತ್ರಿಸಲು ಕ್ರಮವಹಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಬರುವ ನಗರ ಪ್ರಾದೇಶಿಕ ಆರೋಗ್ಯ ಕೇಂದ್ರಗಳಲ್ಲಿ, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ರಚಿಸಿ, ತಾಲೂಕುವಾರು ವರದಿಯನ್ನು ಕಚೇರಿಗೆ ಸಲ್ಲಿಸಬೇಕು ಹಾಗೂ ಅತೀವೃಷ್ಟಿ ಮತ್ತು ನೆರೆಹಾವಳಿಗೊಳಗಾದ ಪ್ರದೇಶಗಳಿಗೆ ತಂಡದೊಂದಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಕ್ರಮಕೈಗೊಳ್ಳುಬೇಕು ಎಂದು ಅವರು ತಿಳಿಸಿದರು. ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.