ಅಧಿಕಾರಿ ಆತ್ಮಹತ್ಯೆ ಪ್ರಕರಣ : ಸಿಬಿಐ ತನಿಖೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಆಗ್ರಹ

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮೇ 31: ವಾಲ್ಮೀಕಿ ನಿಗಮದ ಅಧಿಕಾರಿ ಪಿ. ಚಂದ್ರಶೇಖರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಮತ್ತು ಸಂಬಂಧಪಟ್ಟ ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ರಾಜಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.ಚಂದ್ರಶೇಖರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಆತ್ಮಹತ್ಯೆ ಪ್ರಕರಣ ಇಡೀ ರಾಜ್ಯ ಸರ್ಕಾರದ ಭ್ರಷ್ಟಚಾರಕ್ಕೆ ಇದು ತಾಜ ಉದಾಹರಣೆಯಾಗಿದೆ. ವಾಲ್ಮೀಕಿ ನಿಗಮದಲ್ಲಿದ್ದ, ಕೋಟ್ಯಾಂತರ ಹಣ ಅವ್ಯವಹಾರವಾಗಿದೆ. ಇದರಲ್ಲಿ ಸುಮಾರು ೨೫ ಕೋಟಿ ಹಣವನ್ನು ಪಕ್ಕದ ಜಿಲ್ಲೆಯ ತಮಿಳುನಾಡಿಗೆ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಹೊಸ ಅಕೌಂಟ್‌ನ್ನೇ ತೆರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಇದನ್ನು ಬಳಸಿಕೊಂಡಿದೆ. ನಾವು ಈ ಹಿಂದೆ ಆರೋಪ ಮಾಡಿದಂತೆ ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆಗಾಗಿ ಎಟಿಎಂ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.ಸರ್ಕಾರ ತನ್ನ ಬಂಡತನ ಬಿಟ್ಟು ಇದನ್ನು ಸಿಬಿಐಗೆ ಒಪ್ಪಿಸಬೇಕು. ಸಿಐಡಿ, ಸಿಐಟಿಗಳಿಂದ ನ್ಯಾಯ ಸಿಗುವುದಿಲ್ಲ. ಸಮಯ ವ್ಯರ್ಥ ಮಾಡಬಾರದು. ಇದಕ್ಕಾಗಿ ಒಂದು ವಾರದ ಗಡುವು ನೀಡುತ್ತೇವೆ. ವಾರದೊಳಗೆ ಇದನ್ನು ಸಿಬಿಐಗೆ ಒಪ್ಪಿಸದಿದ್ದರೆ ಬಿಜೆಪಿ ಇಡೀ ರಾಜದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದರು.