ಶ್ರೀ ಅನ್ನದಾನೇಶ್ವರ ಮಠದಲ್ಲಿ ಬಸವೇಶ್ವರ ಜಯಂತಿ – ಮಹಿಳಾ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ ಮೇ ೩೧ : ಮಕ್ಕಳಿಗೆ ಪ್ರತಿನಿತ್ಯ 12ನೇ ಶತಮಾನದ ಬಸವೇಶ್ವರರ ಹಾಗೂ ಇನ್ನಿತರ ಶರಣ ಶರಣೆಯರ ಒಂದೊಂದು ವಚನಗಳನ್ನು ತಿಳಿಸಿಕೊಟ್ಟರೆ ಮುಂದೆ ಅವರ ಜೀವನ ಸುಲಭವಾಗುತ್ತದೆ ಎಂದು ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಡಾ. ಜಸ್ಟಿನ್ ‘ಡಿ’ ಸೌಜಾ ಅವರು ಕರೆ ನೀಡಿದರು.ಅವರು ದೇವರಾಜ ಅರಸು ಬಡಾವಣೆಯಲ್ಲಿರುವ ಹಾಲಕೆರೆ ಶ್ರೀ ಅನ್ನದಾನೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ 269ನೇ ಶಿವಾನುಭವ ಸಂಪದ, ಶ್ರೀ ಬಸವೇಶ್ವರ ಜಯಂತಿ ಹಾಗೂ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮನಸ್ಸಿನ ತಳಮಳ, ಕ್ರೌರ್ಯ ದೂರವಾಗುತ್ತದೆ ಎಂದರು.ಕೋವಿಡ್ ನಂತರ ಮಕ್ಕಳ ಜೀವನ ಶೈಲಿಯೇ ಬದಲಾಗಿದೆ, ಗುರು-ಹಿರಿಯರಲ್ಲಿ ಭಕ್ತಿ ಇಲ್ಲ, ಪೋಷಕರಿಗೆ ಮಕ್ಕಳು ಬೆಲೆ ಕೊಡ್ತಾ ಇಲ್ಲ, ಪೋಷಕರು ಮತ್ತು ಮಕ್ಕಳು ಮೊಬೈಲ್ ದಾಸರಾಗಿದ್ದಾರೆ, ಬಂಧು- ಬಳಗದ ಸಂಪರ್ಕದಿAದ ದೂರವಿರುತ್ತಾರೆ, ಪರಿಸ್ಥಿತಿ ಹೀಗೆ ಮುಂದುವರಿದರೆ ಪೋಷಕರು ದೊಡ್ಡ ದುರಂತವನ್ನು ಅನುಭವಿಸುತ್ತಾರೆ, ಈಗಲೇ ಎಚ್ಚೆತ್ತುಕೊಳ್ಳುವುದು ಅವಶ್ಯಕವೆಂದರು.ಸಮಾಜದಲ್ಲಿ ಮಹಿಳೆಯರ ಪಾತ್ರ ಮುಖ್ಯ. ಆದರೆ ಇತ್ತೀಚೆಗೆ ಆಮಿಷಕ್ಕೆ ಒಳಗಾಗಿ ಪತಿ-ಪತ್ನಿಯರಲ್ಲಿ ಸೌಹಾರ್ದತೆ ಇಲ್ಲ. ಅತ್ತೆ ಅಜ್ಜಿ, ಅಕ್ಕ-ತಂಗಿಯರು ಹೊಣೆಗಾರಿಕೆಯನ್ನು ಅರಿತುಕೊಳ್ಳಬೇಕೆಂದರು.ನಮ್ಮ ದೇಶದ ಸಂಸ್ಕೃತಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಜನನೀಯರು ಮನೆಗೆ ಮೊದಲ ಗುರುವಾಗಿ ಮಕ್ಕಳಿಗೆ ಸಂಸ್ಕಾರದ ಬೀಜ ಬಿತ್ತುವುದರ ಮೂಲಕ ಒಳ್ಳೆಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ನಿವೃತ್ತ ಗ್ರಂಥ ಪಾಲಕಿ ಶ್ರೀಮತಿ ನಾಗರತ್ನ ಹೊಸಮನಿಯವರು ಕರೆ ನೀಡಿದರು.