ಡೆಂಗೀ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೩೦; ಜಿಲ್ಲೆಯಲ್ಲಿ ಡೆಂಗೀ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ. ಡೆಂಗೀ ಹರಡುವ ಸೊಳ್ಳೆಗಳ ನಿಯಂತ್ರಣ ಮಾಡುವಲ್ಲಿ ಸಾರ್ವಜನಿಕರ ಸಹಭಾಗಿತ್ವ ಅವಶ್ಯಕವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ  ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾದ ಮಲೇರಿಯಾ ಮತ್ತು ಇತರೆ ಕೀಟಜನ್ಯ ರೋಗಗಳ ನಿಯಂತ್ರಣ ಕುರಿತಾದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಲಾರ್ವ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ಮನೆ ಮನೆಗಳಿಗೂ ತೆರಳಿ ಸೊಳ್ಳೆಗಳ ನಿಯಂತ್ರಣ ಮಾಡುವ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದಾಗ್ಯೂ ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣದ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸೊಳ್ಳೆ ಕಚ್ಚುವುದರಿಂದ ಮಲೇರಿಯಾ, ಡೆಂಗೀ ಸೇರಿದಂತೆ ಹಲವು ರೋಗಗಳು ಹರಡುತ್ತಿವೆ. ಇದರಿಂದ ಚಿಕಿತ್ಸೆ ನೀಡುವಲ್ಲಿ ತೊಂದರೆ ಉಂಟಾಗುತ್ತಿದೆ. ರೋಗದ ಚಿಕಿತ್ಸೆಗಾಗಿ ಜನರು ಸಹ ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗುತ್ತದೆ. ಡೆಂಗೀ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಾದ ತಕ್ಷಣ ಆರೋಗ್ಯ ಇಲಾಖೆ ಕಾರ್ಯ ವೈಖರಿ ಬಗ್ಗೆ ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ ಆರೋಗ್ಯ ಇಲಾಖೆ ಹೇಳುವ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲ ಎಂದು ಡಾ.ರೇಣುಪ್ರಸಾದ್ ಬೇಸರ ವ್ಯಕ್ತಪಡಿಸಿದರು.ಡೆಂಗೀ ಹರಡುವ ಈಡಿಸ್ ಸೊಳ್ಳೆ ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತದೆ. ಅದ್ದರಿಂದ ತುಂಬು ತೋಳಿನ ಶರ್ಟ್ ಧರಿಸಿ ಕೆಲಸ ಮಾಡುವುದು ಉತ್ತಮ ಅಭ್ಯಾಸವಾಗಿದೆ. ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿ ಇರಿಸಿಕೊಳ್ಳಬೇಕು. ಮಳೆಯ ನೀರು ತೆಂಗಿನ ಚಿಪ್ಪು, ಟಯರ್ ಸೇರಿದಂತೆ ಇತರೆ ವಸ್ತುಗಳಲ್ಲಿ ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಡೆಂಗೀ ಹಾಗೂ ಮಲೇರಿಯಾ ಹರಡುವ ಸೊಳ್ಳೆಗಳು ಮಳೆ ಹಾಗೂ ಸ್ವಚ್ಛ ನೀರಿನಲ್ಲಿ ಸಂತಾನೋತ್ಪಪ್ತಿ ಮಾಡುತ್ತವೆ. ಹಾಗಾಗಿ ಈ ನೀರಿನ ಆಕರಗಳನ್ನು ಸ್ವಚ್ಚವಾಗಿ ಇರಿಸಬೇಕು. ಸೊಳ್ಳೆ ನಿಯಂತ್ರಣದಲ್ಲಿ ಧೂಮೀಕರಣ ಅಷ್ಟೊಂದು ಪರಿಣಾಮಕಾರಿಯಾಗುವುದಿಲ್ಲ. ಧೂಮೀಕರಣದ ವೇಳೆ ಸೊಳ್ಳೆಗಳು ಧೂಮೀಕರಣ ವ್ಯಾಪ್ತಿಯಿಂದ ಹಾರಿ ಹೋಗಿ ಮತ್ತೆ ಹಿಂದಿರುಗುತ್ತವೆ. ಇದರ ಬದಲು ಸೊಳ್ಳೆಗಳ ಲಾರ್ವಾಗಳ ನಿಯಂತ್ರಣಕ್ಕೆ ಗ್ಯಾಂಬೂಸಿಯಾ ಹಾಗೂ ಗಪ್ಪಿ ಮೀನುಗಳನ್ನು ಜಲಮೂಲಗಳಲ್ಲಿ ಸಾಕುವುದು ಉತ್ತಮ ಎಂದು ಡಿಹೆಚ್‍ಒ ಡಾ.ರೇಣುಪ್ರಸಾದ್ ಹೇಳಿದರು.