ಲಾಂಗ್ ನಿಂದ  ಮನೆ ಎದುರು ನಿಲ್ಲಿಸಿದ್ದ ವಾಹನಗಳು ಜಖಂಗೊಳಿಸಿದ ದುಷ್ಕರ್ಮಿಗಳು!

ಸಂಜೆವಾಣಿ ವಾರ್ತೆ
ಶಿವಮೊಗ್ಗ, ಮೇ ೩೧; ನಗರದ ಹೊಸಮನೆ ಮೂರನೇ ಕ್ರಾಸ್‌ನಲ್ಲಿ ರಾತ್ರಿ ವೇಳೆ ಗ್ಯಾಂಗ್‌ವೊಂದು ಮನೆ ಎದುರು ನಿಲ್ಲಿಸಿದ್ದ ಸ್ಥಳೀಯರ ಕಾರು, ಬೈಕ್, ಆಟೋಗಳ ಗಾಜುಗಳನ್ನು ಮಚ್ಚಿನಿಂದ ಹೊಡೆದು ಧ್ವಂಸಗೊಳಿಸಿದ ಘಟನೆ ನಡೆದಿದೆ. ಇದರ ಸಿಸಿ ಕ್ಯಾಮರಾದ ದೃಶ್ಯಗಳು ಲಭಿಸಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.ಮನೆಯ ಮುಂದೆ ನಿಲ್ಲಿಸಿದ್ದ ನಾಲ್ಕು ಕಾರು, ನಾಲ್ಕು ದ್ವಿಚಕ್ರ ವಾಹನ ಹಾಗೂ ಎರಡು ಆಟೋಗಳನ್ನು ನಶೆಯಲ್ಲಿದ್ದವರು ಹಾಳು ಮಾಡಿದ್ದಾರೆ. ಜಗದೀಶ್ ಅವರಿಗೆ ಸೇರಿದ ಅಂಗಡಿಗೆ ಹಾನಿ ಮಾಡಲಾಗಿದ್ದು,  ಸಂದೇಶ್ ಅವರಿಗೆ ಸೇರಿದ ಹುಂಡೈ , ಸ್ಯಾಂಟ್ರೋ ಕಾರ್ ಜಖಂ ಮಾಡಲಾಗಿದೆ. ಮಂಜು, ಲಿಂಗರಾಜು ಅವರಿಗೆ ಸೇರಿದ ಎರಡು ಆಟೋಗಳ ಗಾಜುಗಳನ್ನು ಪುಡಿ ಮಾಡಲಾಗಿದೆ.  ಸಿದ್ದಪ್ಪ, ಜಗದೀಶ್, ಚಂದ್ರಪ್ಪ ಸೇರಿದಂತೆ ನಾಲ್ವರ ಬೈಕ್ ಜಖಂಗೊಳಿಸಲಾಗಿದೆ .ಮಾರಿಕಾಂಬ ದೇವಸ್ಥಾನ ಸಮೀಪ  ಬಾಬು ಜಗಜೀವನ್ ರಾಮ್ ಸಮುದಾಯ ಭವನದ ಸುತ್ತಮುತ್ತಲಿನ ಮನೆಗಳ ಮುಂದೆ ನಿಲ್ಲಿಸಿರುವ ವಾಹನಗಳನ್ನು ಧ್ವಂಸ ಮಾಡಲಾಗಿದ್ದು, ಸ್ಥಳೀಯರು ಹೇಳುವ ಪ್ರಕಾರ, ಲಾಂಗ್‌ಗಳಿಂದ ಹೊಡೆದು ಈ ಕೃತ್ಯ ಎಸಗಲಾಗಿದೆ. ಕೆಲವು ದಿನಗಳ ಹಿಂದೆ, ಹೊಸಮನೆ ಎರಡನೇ ತಿರುವಿನಲ್ಲಿ ಮಚ್ಚು ಹಿಡಿದು ಓಡಾಡಿದ್ದ ದುಷ್ಕರ್ಮಿಗಳು ಓಮ್ನಿ ಮತ್ತು ಆಕ್ಟಿವಾ ಕಾರನ್ನು ಧ್ವಂಸ ಮಾಡಿದ್ದರು. ಇದೀಗ ಅದೇ ಮಾದರಿ ಘಟನೆ ಮತ್ತೆ ಮರುಕಳಿಸಿದೆ.