ಏಳು ದಿನಗಳ ಕಾಲ ಸಾವಿರಾರು ಸಸಿ ನೆಡುವ ಸಪ್ತಾಹಕ್ಕೆ ಚಾಲನೆ
ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಮೇ, 31;, ಕಳೆದ ಮೂರ್ನಾಲ್ಕು  ತಿಂಗಳಿನಿಂದ ಬಿಸಿಲ ಝಳಕ್ಕೆ ಜೀವರಾಶಿ ತಲ್ಲಣಿಸಿತ್ತು. ಪ್ರಸಕ್ತ ಸಾಲಿನ  ಮೂರನೇ ಮಳೆ ಕೃತಿಕಾ ಭಾರಿ ಪ್ರಮಾಣದ ಗುಡುಗು ಸಿಡಿನಿಂದ ಆರಂಭವಾಗಿ ಮಳೆಯ ಸಿಂಚನ ಇಳೆಗೆ ಇದೀಗ ಆಗಿರುವುದು ಸರಿ ಅಷ್ಟೇ. ಮೇಘ ಸ್ಪರ್ಶದಿಂದ ತಂಪಾದ ಧರೆಯ ಮೇಲಿನ ಸಸ್ಯರಾಶಿಗೆ ಜೀವ ಕಳೆ ಬಂದು, ತಂಪಿನ ವಾತಾವರಣದ ಜೊತೆಗೆ ಹಸಿರಾಗಿರುವುದು  ಸಂತಸದ ಸಂಗತಿ.ಇಂತಹ ಸಂದರ್ಭದಲ್ಲಿ ಹವಾಮಾನದ ಕ್ರಮವನ್ನು ಮನಗಂಡ ಐತಿಹಾಸಿಕ ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮತ್ತದರ ಅಂಗ ಸಂಸ್ಥೆ ಎಸ್ ಜೆ ಎಂ  ವಿದ್ಯಾ ಪೀಠದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಆಲೋಚಿಸಿ ಶ್ರೀಮಠಕ್ಕೆ ಸಂಬಂಧಿಸಿದ ವಿವಿಧ ಕಡೆಯ ಖಾಲಿ ಜಾಗ ಮತ್ತು ವಿದ್ಯಾಪೀಠದಡಿಯಲ್ಲಿ ಬರುವ ಸ್ಥಳೀಯ ಶಾಲಾ-ಕಾಲೇಜುಗಳ ಪ್ರದೇಶ ಗುರುತಿಸಿ, ಅದರೊಂದಿಗೆ ಜಿಲ್ಲಾ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬರುವ ಜೂನ್ 5, ವಿಶ್ವ ಪರಿಸರ ದಿನ ಆದಕ್ಕೋಪ್ಪುವಂತೆ ಇಂದಿನಿಂದ ಏಳು ಕಡೆ ಸಾವಿರಾರು ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಂಡು ಇಂದು ಅದಕ್ಕೆ ಚಾಲನೆ ನೀಡಲಾಯಿತು.ಚಿತ್ರದುರ್ಗ ನಗರದ ಎಸ್ ಜೆ  ಎಂ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬಸವೇಶ್ವರ ವೈದ್ಯಕೀಯ  ಮಹಾವಿದ್ಯಾಲಯದ ವ್ಯಾಪ್ತಿಗೆ ಬರುವ ಇತರ ಶಾಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿನಿಲಯಗಳ ಆವರಣದಲ್ಲಿಂದು ಅಕ್ಷರಶಃ   ಸಂಭ್ರಮ ಮನೆ ಮಾಡಿತ್ತು. ನಿಗದಿತ ಸಮಯ ಗೊತ್ತು ಮಾಡಿದಂತೆ ಆವರಣದಲ್ಲಿ ಶಾಲಾ-ಕಾಲೇಜುಗಳ ಬಹುತೇಕ ಎಲ್ಲ ಸಿಬ್ಬಂದಿ ಕೆಲ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಖುಷಿಯಿಂದ ಬಂದು ಸೇರಿದರು. ಮುಂಜಾಗ್ರತೆಯಾಗಿ ಸಸಿ ನೆಡಲು ತೋಡಿದ ಗುಂಡಿಗಳ ಹತ್ತಿರ ವಿವಿಧ ಬಗೆಯ ಸಸಿಗಳನ್ನು ಇಡಲಾಗಿತ್ತು. ಮುರುಘಾಮಠದ ವಿವಿಧ ಶಾಖಾ ಮಠಗಳ ಹಾಗೂ ಆಡಳಿತ ಮಂಡಳಿಯ ಸದಸ್ಯರ ಆಗಮನವಾಯಿತು.ನಂತರ ಗೌರವಾನ್ವಿತ  ಅತಿಥಿಗಳಲ್ಲಿ ಆಡಳಿತ ಮಂಡಳಿಯ ಸದಸ್ಯರಲ್ಲಿ ಒಬ್ಬರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನೆರದ ಪರಿಸರಾಸಕ್ತರನ್ನು ಉದ್ದೇಶಿ ಯಾವುದೇ ವಿಶೇಷ ದಿನಗಳನ್ನು ಯಾಂತ್ರಿಕವಾಗಿ ಆಚರಿಸುವುದು ಒಂದು ರೀತಿಯಾದರೆ ಮತ್ತೊಂದು ರೀತಿ  ಪರಿಣಾಮಕಾರಿಯಾಗಿ ಆಚರಿಸಿ ಅದನ್ನು ಸಮಾಜಕ್ಕೆ ಕೊಡುಗೆಯಾಗುವ ರೀತಿ ಅನುಷ್ಠಾನಕ್ಕೆ ತರುವುದು ಇನ್ನೊಂದು  ಬಗೆಯದು. ಆದರೆ ನಾವಿಂದು ಹಮ್ಮಿಕೊಂಡಿರುವ ಏಳು ದಿನಗಳ ಸಸಿ ನೆಡುವ ಸಪ್ತಾಹ ಕೇವಲ ಆಚರಣೆಗೆ ಸೀಮಿತವಾಗಬಾರದು, ಅದರಿಂದ ನಮ್ಮ ನಡವಳಿಕೆಯನ್ನು ಈಗಿನ ವಿದ್ಯಾರ್ಥಿ ಹಾಗೂ  ಯುವ ಸಮೂಹಕ್ಕೆ  ಮಾದರಿಯಾಗಬಲ್ಲ ನಡೆಯಾಗಬೇಕೆಂಬ ಆಶಯ ಈ ವಿಶ್ವ ಪರಿಸರ ದಿನದ ಉದ್ದೇಶವಾಗಿದೆ.,ಸರ್ಕಾರದ ಯಾವುದೇ ಯೋಜನೆಯ ಕಾರ್ಯಗಳು ಕಾರ್ಯಗತವಾಗಿ ಫಲಪ್ರದವಾಗಲು ಸಾರ್ವಜನಿಕರ ಸಹಭಾಗಿತ್ವ ಮತ್ತು ಅನುಷ್ಠಾನ ಅಗತ್ಯ. ಈ  ಆವರಣದಲ್ಲಿಂದು  ಕನಿಷ್ಠ  ಒಂದು ಸಾವಿರ ಸಸಿ ನೆಡಲು ಅಗತ್ಯಕ್ರಮ ಕೈಗೊಳ್ಳಲಾಗಿದೆ .ಅದರಂತೆ ಸಂಬಂಧಿಸಿದವರಿಗೆ ಸೂಚನೆಯನ್ನು ನೀಡಲಾಗಿದ್ದು,  ಇಲ್ಲಿರುವ ಎಲ್ಲ ಪ್ರಾಚಾರ್ಯರು ಮತ್ತು ಸಿಬ್ಬಂದಿ ಒಂದು ಜವಾಬ್ದಾರಿ ತೆಗೆದುಕೊಳ್ಳಬೇಕು. ಒಂದು ಸಾವಿರ ಸಸಿಗಳ ಪೋಷಣೆಯ ಜವಾಬ್ದಾರಿಯನ್ನು ಇಂತಿಷ್ಟು ಅಂತ ಭಾಗ ನೀವೇ ಮಾಡಿಕೊಂಡು ಸಲಹುವ ಕ್ರಮಕ್ಕೆ ಮುಂದಾಗಬೇಕಾಗಿದೆ. ಮುಖ್ಯಸ್ಥರುಗಳು ಕಾಲೇಜಿನ ಒಳಗೆ ಹೆಜ್ಜೆ ಇಡುವ ಮುನ್ನ ಗಿಡಗಳನ್ನು ಒಮ್ಮೆ ನೋಡಿ ಆಮೇಲೆ ಒಳಗೋಗಿ ಎಂದು ಸಲಹೆ ನೀಡಿದರು. ನಮ್ಮ ಮನೆಯ ಮಕ್ಕಳು ಮತ್ತು ಸದಸ್ಯರಂತೆ ನೆಟ್ಟಿರುವ ಗಿಡಗಳನ್ನು ನೋಡಿಕೊಂಡು ಸಲಹಲಾಗುತ್ತೆಂಬ ಹೊಣೆಗಾರಿಕೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.