ಜನತೆ ಅಧಿಕಾರ ನೀಡಿದರೆ ಅಭಿವೃದ್ಧಿ ಮಾಡಿ ತೋರಿಸುತ್ತೇನೆ: ಡಾ. ಪ್ರಭಾ ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮೇ.೩೦: ದಾವಣಗೆರೆ ಜಿಲ್ಲೆಯ ಜನತೆ ಅಧಿಕಾರ ನೀಡಿದರೆ ಅಭಿವೃದ್ಧಿ ಹಾಗೂ ಕೆಲಸ ಮಾಡಿ ತೋರಿಸುತ್ತೇನೆ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಹೇಳಿದರು. ನಗರದ ಎಂಸಿಸಿ ಬಿ ಬ್ಲಾಕ್ ನಲ್ಲಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಗೃಹ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಲೋಕಸಭೆ ಚುನಾವಣೆಯು ಚೆನ್ನಾಗಿ ನಡೆದಿದೆ. ಪ್ರತಿಯೊಬ್ಬ ಕಾರ್ಯಕರ್ತರು, ಮುಖಂಡರು ಹಗಲಿರುಳು ಶ್ರಮಿಸಿದ್ದಾರೆ. ಹಾಗಾಗಿ, ಗೆಲುವು ನಮ್ಮದಾಗಲಿದೆ ಎಂಬುದಾಗಿ ಮುಖಂಡರು ಹಾಗೂ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳು ಜನರ ತಲುಪಿವೆ. ಗ್ಯಾರಂಟಿ ಯೋಜನೆ, ಜಿಲ್ಲೆಯ ಏಳು ಶಾಸಕರು, ಜಿಲ್ಲೆ, ತಾಲೂಕು, ಬ್ಲಾಕ್, ಬೂತ್ ಮಟ್ಟದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಶಾಸಕರು, ನಾಯಕರು, ಕಾರ್ಯಕರ್ತರೆಲ್ಲರ ಶ್ರಮದ ಫಲವಾಗಿ ಒಳ್ಳೆಯ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಎಷ್ಟು ಮುನ್ನಡೆ ಪಡೆಯುತ್ತೇನೆ, ಫಲಿತಾಂಶ ಏನು ಬರುತ್ತದೆ ಎಂಬುದರ ಬಗ್ಗೆ ಚಿಂತಿಸುತ್ತಿಲ್ಲ. ಗ್ರಾಮ ಪಂಚಾಯಿತಿಯಿಂದ ಹಿಡಿದು ಜಿಲ್ಲಾ ಮಟ್ಟದ ನಾಯಕರು ಭೇಟಿ ಮಾಡಿ ಚುನಾವಣೆ ಎದುರಿಸಿದ ಪರಿ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ. ಈ ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಹೊಸ ಸಂಸದರನ್ನು ನೋಡುತ್ತೇವೆ. ಇದು 20 ವರ್ಷಗಳ ಬಳಿಕ ಎಂಬುದಾಗಿ ಜನರೇ ಹೇಳುತ್ತಿದ್ದಾರೆ. ಪ್ರತಿ ಗ್ರಾಮಗಳಿಗೂ ಹೋದಾಗಲೂ ಜನರು ಇದೇ ಮಾತನ್ನು ಚುನಾವಣಾ ಪ್ರಚಾರಕ್ಕೆ ಹೋದಂತ ಸಂದರ್ಭದಲ್ಲಿ ಹೇಳುತ್ತಿದ್ದರು. ಅದು ಈಗ ನಿಜವಾಗುತ್ತಿದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಪ್ರತಿ ಗ್ರಾಮಗಳಲ್ಲಿಯೂ ಜನರು ಲೋಕಸಭೆ ಚುನಾವಣೆಯನ್ನು ಗ್ರಾಮ ಪಂಚಾಯಿತಿ ಚುನಾವಣೆಯಂತೆ ಎದುರಿಸಿದ್ದೇವೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ, ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಭಿನ್ನಮತ, ಭಿನ್ನಾಭಿಪ್ರಾಯ ಇಲ್ಲದೇ ಕೆಲಸ ಮಾಡಿದ್ದು, ಫಲಿತಾಂಶ ನಮ್ಮ ಪರವಾಗಿ ಬರುವ ವಿಶ್ವಾಸ ಇದೆ ಎಂದರು. ಗೋಷ್ಠಿಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ನ ಕಾಂಗ್ರೆಸ್ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್, ವೀರಣ್ಣ, ಅಣಬೇರು ರಾಜಣ್ಣ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್, ದಿನೇಶ್ ಕೆ. ಶೆಟ್ಟಿ, ಎ. ನಾಗರಾಜ್ ಮತ್ತಿತರರು ಹಾಜರಿದ್ದರು.