ನಿಧಿ ಆಸೆಗೆ ಪುರಾತನ ದೇವಸ್ಥಾನ ಧ್ವಂಸ

ಸಂಜೆವಾಣಿ ವಾರ್ತೆ
ದಾವಣಗೆರೆ, ಮೇ.31:ನಿಧಿಯ ಆಸೆಗಾಗಿ ಸುಮಾರು 300 ವರ್ಷ ಹಳೆಯದಾದ ಶ್ರೀ ಆಂಜನೇಯ ಸ್ವಾಮಿಯ ವಿಗ್ರಹವನ್ನು ಬಗೆದು, ಪುರಾತನ ಕಲ್ಲಿನ ಪುಟ್ಟ ದೇವಸ್ಥಾನ ಕೆಡವಿ, ಧ್ವಂಸಗೊಳಿಸಿದ ಘಟನೆ ತಾಲೂಕಿನ ಎಚ್.ರಾಂಪುರ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ಎಚ್.ರಾಂಪುರ ಗ್ರಾಮದ ಕೋನಮನಹಳ್ಳಿ ನಿರ್ಜನ ಗುಡ್ಡ ಪ್ರದೇಶದಲ್ಲಿ ಕಳೆದ 3 ಶತಮಾನಗಳಿಂದಲೂ ಶ್ರೀ ಆಂಜನೇಯ ಸ್ವಾಮಿಯ ಪುಟ್ಟ ಕಲ್ಲುಗಳ ದೇವಸ್ಥಾನವು ಇತ್ತು. ಶ್ರೀ ಆಂಜನೇಯ ಸ್ವಾಮಿ ಅಲ್ಲಿ ಒಡ ಮೂಡಿದ್ದ ಕಾರಣಕ್ಕೆ ಇಡೀ ಗ್ರಾಮಸ್ಥರು ಅತ್ಯಂತ ಶ್ರದ್ಧಾಭಕ್ತಿಯಿಂದ ಶ್ರೀ ಆಂಜನೇಯ ಸ್ವಾಮಿಗೆ ನಡೆದುಕೊಳ್ಳುತ್ತಿದ್ದರು.ಆದರೆ, ಕೋನಮನಹಳ್ಳಿ ಶ್ರೀ ಆಂಜನೇಯ ದೇವಸ್ಥಾನ ಕೆಡವಿ, ಶ್ರೀ ಸ್ವಾಮಿಯ ವಿಗ್ರಹವನ್ನು ಬಗೆದು, ಅದರಡಿ ನಿಧಿಗಾಗಿ ದುಷ್ಕರ್ಮಿಗಳು ಹುಡುಕಾಟ ನಡೆಸಿದ್ದಾರೆ. ಶತಮಾನಗಳಷ್ಟು ಹಳೆಯ ದೇವಸ್ಥಾನದ ಶ್ರೀ ಆಂಜನೇಯ ವಿಗ್ರಹದಡಿ ನಿಧಿ ಆಸೆಗೆ ನಿಧಿಗಳ್ಳರು ಬಂದು ದೇವಸ್ಥಾನ ಧ್ವಂಸಗೊಳಿಸಿರುವ ವಿಚಾರ ಬೆಳಿಗ್ಗೆ ಇಡೀ ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಶ್ರೀ ಆಂಜನೇಯ ಭಕ್ತರು, ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು.ನಿತ್ಯವೂ ಭಕ್ತರಿಂದ ಪೂಜಿಸಲ್ಪಡುತ್ತಿದ್ದ ದೇವರು ಹಾಗೂ ದೇವಸ್ಥಾನದ ಸ್ಥಿತಿ ಕಂಡ ಗ್ರಾಮಸ್ಥರು, ಭಕ್ತಾದಿಗಳು ದುಷ್ಕರ್ಮಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಮಾಯಕೊಂಡ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.