ಸರ್ಕಾರಿ ಶಾಲೆಗಳ ಅವನತಿಗೆ ಕಾಂಗ್ರೆಸ್ ಕಾರಣ ಆರೋಪ
ಮಧುಗಿರಿ, ಮೇ ೩೧- ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಆರಂಭಿಸುತ್ತೇವೆ ಎಂದು ಕಾಂಗ್ರೆಸ್‌ನವರು ಹೊರಟಿದ್ದು, ಸರ್ಕಾರಿ ಶಾಲೆಗಳಲ್ಲಿ ೬೦ ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದ್ದು, ೫೦ ಸಾವಿರಕ್ಕೂ ಹೆಚ್ಚು ಕೊಠಡಿಗಳ ಸಮಸ್ಯೆ ಇದೆ. ಸರ್ಕಾರಿ ಶಾಲೆಗಳ ಅವನತಿಗೆ ಕಾರಣವಾಗುತ್ತಿರುವ ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಆರೋಪಿಸಿದರು.
ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಪರ ಮತ ಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದರೂ ಬರೀ ಗ್ಯಾರಂಟಿ ಯೋಜನೆಗಳ ಜಪ ಮಾಡುತ್ತಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಶಾಲೆಗಳು ಆರಂಭವಾಗುತ್ತಿದ್ದು, ಇಲ್ಲಿಯವರೆಗೂ ಒಂದೇ ಒಂದು ಶಿಕ್ಷಕರನ್ನೂ ನೇಮಿಸಿಲ್ಲ. ಈ ಸರ್ಕಾರದಲ್ಲಿ ಅಮ್ಮಂದಿರು ಬಸ್‌ಗಳಲ್ಲಿ ಹೋಗುತ್ತಿದ್ದರೆ, ಸರ್ಕಾರಿ ಶಾಲೆಯ ಮಕ್ಕಳು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾರೆ. ಕನ್ನಡ ಓದಲು ಬಾರದವರನ್ನು ಶಿಕ್ಷಣ ಮಂತ್ರಿಗಳನ್ನಾಗಿ ಮಾಡಿದ್ದಾರೆ. ಇವರು ಶಿಕ್ಷಣ ಸಚಿವರಾಗಿ ಮುಂದುವರಿಯಲು ಅರ್ಹರಲ್ಲ ಎಂದರು.
ಮಕ್ಕಳಿಗೆ ವಿದ್ಯಾರ್ಥಿ ವೇತನ ನಿಂತು ಹೋಗಿದೆ. ಶಾಲೆಗಳಿಗೆ ಮೂಲಭೂತ ಸೌಕರ್ಯ ನೀಡದೆ, ಶಾಲೆಗಳನ್ನು ಅಭಿವೃದ್ಧಿ ಮಾಡದೇ ಅನುದಾನಿತ ಮತ್ತು ಸರ್ಕಾರಿ ಶಾಲೆಗಳನ್ನು ಸರ್ವನಾಶ ಮಾಡುತ್ತಿದ್ದಾರೆ. ೫,೮,೯ ನೇ ತರಗತಿ ಮಕ್ಕಳಿಗೆ ಮೂರು ಪರೀಕ್ಷೆಗಳನ್ನು ಮಾಡಿ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಠಿಸಿದ್ದಾರೆ. ಸಿಇಟಿ ಯಲ್ಲಿ ಸುಮಾರು ೫೦ ಪ್ರಶ್ನೆಗಳನ್ನು ಔಟ್ ಆಫ್ ಸಿಲಬಸ್‌ನಲ್ಲಿ ನೀಡುವ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಚೆಲ್ಲಾಟವಾಡಿದರು. ೭ ನೇ ವೇತನ ಆಯೋಗ ಜಾರಿ ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಜಾರಿಗೊಳಿಸಲಿಲ್ಲ. ಕೇಂದ್ರದ ಹಣ ಸಂಪೂರ್ಣವಾಗಿ ಬಂದಿದ್ದರೂ ರೈತರ ಖಾತೆಗೆ ಹಣ ಬಂದಿಲ್ಲ. ಎನ್‌ಪಿಎಸ್‌ನ್ನು ತೆಗೆದು ಹಾಕಿ ಓಪಿಎಸ್ ಮಾಡುತ್ತೇವೆ ಎಂದು ಹೇಳಿದ್ದರೂ ಇದುವರೆಗೂ ಮಾಡಿಲ್ಲ. ಆಯೋಗ ರಚಿಸಿದ್ದು, ಬಿಟ್ಟರೆ ಒಂದೇ ಒಂದು ಮೀಟಿಂಗ್ ಮಾಡಿಲ್ಲ. ಈ ಸರ್ಕಾರ ಶಿಕ್ಷಕ ಮತ್ತು ಶಿಕ್ಷಣ ದ್ರೋಹಿ ಸರ್ಕಾರ ಎಂದು ಲೇವಡಿ ಮಾಡಿದರು.
ಸರ್ಕಾರ ಜಾರಿಗೊಳಿಸಿರುವ ಶಾಲಾ ಅವಧಿಯಿಂದಾಗಿ ಶಿಕ್ಷಕರಿಗೆ, ಮಕ್ಕಳಿಗೆ ಮತ್ತು ಪೋಷಕರಿಗೂ ತೊಂದರೆಯಾಗುತ್ತಿದ್ದು, ಈ ಶೈಕ್ಷಣಿಕ ವರ್ಷದಿಂದ ಹಳೆಯ ಪದ್ದತಿಯ ಶಾಲಾ ಅವಧಿ ಜಾರಿಯ ಬಗ್ಗೆ ಸರ್ಕಾರ ಇದರ ಕಡೆ ಗಮನ ಹರಿಸಬೇಕು ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ವೈ.ಎ. ನಾರಾಯಣಸ್ವಾಮಿ ಸ್ಪರ್ಧಿಸಿದ್ದು, ಅವರಿಗೆ ಯಾವುದೇ ವಿರೋಧಿ ಅಲೆ ಇಲ್ಲ. ಅವರು ಶಿಕ್ಷಕರ ಸಮಸ್ಯೆಗಳಿಗೆ ಉತ್ತಮವಾಗಿ ಸ್ಪಂದಿಸಿದ್ದಾರೆ. ೩೨ ತಾಲ್ಲೂಕಿನಲ್ಲೂ ಶಿಕ್ಷಕರು ಸಂಪೂರ್ಣವಾಗಿ ನಮಗೆ ಬೆಂಬಲ ನೀಡುತ್ತಿದ್ದಾರೆ. ನಾರಾಯಣಸ್ವಾಮಿ ಯವರು ಶಿಕ್ಷಕರ ಪರ ನಿರಂತರ ಹೋರಾಟ ಮಾಡಿದ್ದು, ಕೊರೊನಾ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರ ಮನವೊಲಿಸಿ ೫೦೦ ಕೋಟಿ ಹಣ ಬಿಡುಗಡೆಗೊಳಿಸಿ ಪ್ರತಿಯೊಬ್ಬ ಶಿಕ್ಷಕರ ಖಾತೆಗೆ ತಲಾ ೫ ಸಾವಿರ ಜಮೆ ಮಾಡಿಸುವ ಮೂಲಕ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದರು ಹಾಗಾಗಿ ಶೇ. ೧೦೦ ರಷ್ಟು ಅವರ ಗೆಲುವು ಖಚಿತ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ, ಪ್ರಧಾನ ಕಾರ್ಯದರ್ಶಿ ಲತಾ ಪ್ರದೀಪ್, ಮಂಡಲ ಅಧ್ಯಕ್ಷ ನಾಗೇಂದ್ರ,ಶಿಕ್ಷಕರುಗಳಾದ ಧನಂಜಯ, ಪಾಟೀಲ್, ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.