ಸಾಸಲು ಸತೀಶ್‌ಗೆ ಎಂಎಲ್ಸಿ ಸ್ಥಾನಕ್ಕೆ ಮನವಿ
ಹುಳಿಯಾರು, ಮೇ ೩೧- ಕಾಡುಗೊಲ್ಲ ಸಮುದಾಯದ ಮುಖಂಡ, ಪಿಎಚ್‌ಡಿ ಪದವೀಧರ, ಸಂಘಟನಾ ಚತುರ, ಕಾಂಗ್ರೆಸ್‌ನದ ನಿಷ್ಠಾವಂತ ಕಾರ್ಯಕರ್ತ ಡಾ. ಸಾಸಲು ಸತೀಶ್ ಅವರಿಗೆ ವಿಧಾನಪರಿಷತ್‌ನಲ್ಲಿ ಅವಕಾಶ ಕಲ್ಪಿಸುವಂತೆ ಚಿಕ್ಕನಾಯಕನಹಳ್ಳಿ ಕಾಂಗ್ರೆಸ್ ಮುಖಂಡ ಕೆ.ಎನ್. ಉಮೇಶ್ ಮನವಿ ಮಾಡಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಡುಗೊಲ್ಲ ಬುಡಕಟ್ಟು ಸಮುದಾಯವು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ರಾಜ್ಯದ ೧೨ ಜಿಲ್ಲೆ, ೪೦ ತಾಲ್ಲೂಕುಗಳಲ್ಲಿ ಸುಮಾರು ೧,೫೦೦ ಕಾಡುಗೊಲ್ಲರ ಹಟ್ಟಿಗಳಲ್ಲಿ ೧೨ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಮುದಾಯದ ಮಹಿಳೆ ಜಯಮ್ಮ ಬಾಲರಾಜ್ ಅವರನ್ನು ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಅದು ಬಿಟ್ಟರೆ ಈವರೆಗೂ ಅವಕಾಶ ಸಿಕ್ಕಿಲ್ಲ. ಹಾಗಾಗಿ ಈ ಬಾರಿ ಸಾಸಲು ಸತೀಶ್ ಅವರನ್ನು ಎಂಎಲ್ಸಿ ಮಾಡುವಂತೆ ಮನವಿ ಮಾಡಿದ್ದಾರೆ.
ಸಾಸಲು ಸತೀಶ್ ಅವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸುವ ಮೂಲಕ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾರ್ಯಕರ್ತರ ಗೆಲುವಿಗೆ ಶ್ರಮಿಸುವ ಮೂಲಕ ಪಕ್ಷವನ್ನು ಸದೃಢವಾಗಿ ಕಟ್ಟಿ ಬೆಳೆಸಿದ್ದಾರೆ. ಸತತ ಎರಡು ಬಾರಿ ವಿಧಾನಸಭಾ ಟಿಕೆಟ್ ವಂಚಿತರಾಗಿದ್ದರು ಕೂಡಾ ಪಕ್ಷದ ಶಿಸ್ತಿನ ಸಿಪಾಯಿಯತೆ ಕ್ಷೇತ್ರದಲ್ಲಿ ನೆಲೆಯೂರಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಮುದ್ದಹನುಮೇಗೌಡ ಪರ ಹಗಲಿರುಳು ಎನ್ನದೆ ದುಡಿದಿದ್ದಾರೆ. ಇಂತಹವರಿಗೆ ವಿಧಾನಪರಿಷತ್‌ನಲ್ಲಿ ಅವಕಾಶ ಕೊಟ್ಟರೆ ರಾಜ್ಯಾದ್ಯಂತ ಕಾಂಗ್ರೆಸ್ ಸಂಘಟನೆಗೆ ಬಲಗೊಳಿಸುವ ಜತೆಗೆ ಬುಡಕಟ್ಟು ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಿಗಲಿದೆ ಎಂದು ಉಮೇಶ್ ಅಭಿಪ್ರಾಯಪಟ್ಟಿದ್ದಾರೆ.