ಮಹಿಳೆ ನಿಧನ ಎಂದು ದಾಖಲಿಸಿ ಪಿಂಚಣಿ ಸ್ಥಗಿತ: ಕ್ರಮಕ್ಕೆ ಆಗ್ರಹ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.31: ಜೀವಂತವಾಗಿರುವ ವೃದ್ದ ಮಹಿಳೆಯನ್ನು ಸರ್ಕಾರಿ ದಾಖಲೆಗಳಲ್ಲಿ ನಿಧನ ಹೊಂದಿದ್ದಾರೆಂದು ದಾಖಲಿಸಿ ಆಕೆಗೆ ಬರುತ್ತಿದ್ದ ಇಂದಿರಾ ಗಾಂಧಿ ಪಿಂಚಿಣಿ ಹಣವನ್ನು ಸ್ಥಗಿತಗೊಳಿಸಿರುವ ಘಟನೆ ಬಯಲಿಗೆ ಬಂದಿದೆ.
ತಾಲೂಕಿನ ಕಿಕ್ಕೇರಿ ಹೋಬಳಿಯ ಉದ್ದಿನ ಮಲ್ಲನ ಹೊಸೂರು ಗ್ರಾಮದ ದಿವಂಗತ ನಂಜೇಗೌಡರ ಪತ್ನಿ ಲಕ್ಷ್ಮಮ್ಮ (83) ಅಂಗವಿಕಲ ವಯೋವೃದ್ದ ಮಹಿಳೆಯಾಗಿದ್ದು ಇಂದಿರಾ ಗಾಂಧಿ ಪಿಂಚಿಣಿ ಯೋಜನೆಯಡಿ ವೃದ್ದಾಪ್ಯ ವೇತನ ಪಡೆಯುತ್ತಿದ್ದರು. ಪತಿ ಮತ್ತು ಮಕ್ಕಳಿಲ್ಲದೆ ಉದ್ದಿನ ಮಲ್ಲನ ಹೊಸೂರು ಗ್ರಾಮದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿರುವ ಲಕ್ಷ್ಮಮ್ಮ ಅವರಿಗೆ ಅವರು ಪಡೆಯುತ್ತಿರುವ ಪಿಂಚಿಣಿ ಹಣವೇ ಜೀವನಾದಾರ. ವಯೋವೃದ್ದೆಯಾಗಿದ್ದು ಅಂಗವಿಕಲತೆ ಹೊಂದಿರುವ ಇವರಿಗೆ ಕೂಲಿ ಮಾಡಿ ಬದುಕುವ ಶಕ್ತಿಯೂ ಇಲ್ಲ. ಅತ್ಯಂತ ಕಡು ಬಡತನದಲ್ಲಿ ಬದುಕುತ್ತಿರುವ ಲಕ್ಷ್ಮಮ್ಮ ನವರಿಗೆ ಅವರ ಪೆನ್ಷನ್ ನಂ 2293100010008636 ಮೂಲಕ ಇಂದಿರಾ ಗಾಂಧಿ ಪಿಂಚಣಿ ಯೋಜನೆಯ ಮೂಲಕ ಹಣ ಬರುತ್ತಿತ್ತು. ಆದರೆ ಈ ಭಾಗದ ಗ್ರಾಮ ಆಡಳಿತ ಅಧಿಕಾರಿ ತಿಪ್ಪೇಶ್ ಪೂರ್ವಪರ ಪರಿಶೀಲನೆ ಮಾಡದೆ ಲಕ್ಷ್ಮಮ್ಮ ಅವರು ನಿಧನರಾಗಿದ್ದಾರೆಂದು ಸುಳ್ಳು ವರದಿ ದಾಖಲಿಸಿ 14-09-2023 ರಿಂದ ಪಿಂಚಿಣಿ ಸ್ಥಗಿತಗೊಳಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಜೀವನ ನಿರ್ವಹಣೆಗೆ ಹಣವಿಲ್ಲದೆ ಲಕ್ಷ್ಮಮ್ಮ ಪರಿತಪಿಸುತ್ತಿದ್ದು ನಾನಿನ್ನೂ ಬದುಕಿದ್ದೇನೆ. ದಯಮಾಡಿ ನನಗೆ ಪಿಂಚಿಣಿ ಹಣ ಕೊಡಿ ಎಂದು ಕಿಕ್ಕೇರಿ ನಾಡ ಕಛೇರಿ ಹಾಗೂ ಪಟ್ಟಣದ ತಾಲೂಕು ಕಛೇರಿಗೆ ಇಳಿ ವಯಸ್ಸಿನಲ್ಲಿ ಅಲೆದಾಡುತ್ತಿದ್ದಾರೆ.
ರೈತಸಂಘ ಆಗ್ರಹ: ಬಡ ವಯೋವೃದ್ದೆ ಲಕ್ಷ್ಮಮ್ಮ ಅವರ ಸಂಕಷ್ಠದ ಬದುಕಿನ ಬಗ್ಗೆ ಸುದ್ದಿ ತಿಳಿದ ತಾಲೂಕು ರೈತಸಂಘದ ಮುಖಂಡರು ವಯೋವೃದ್ದೆ ಲಕ್ಷ್ಮಮ್ಮ ಅವರೊಂದಿಗೆ ಪಟ್ಟಣದ ತಾಲೂಕು ಕಛೇರಿಗೆ ಆಗಮಿಸಿ ಬಡ ಮಹಿಳೆಗೆ ತಕ್ಷಣವೇ ಆಕೆಯ ಹಕ್ಕಿನ ಪಿಂಚಿಣಿ ಮಂಜೂರು ಮಾಡುವಂತೆ ಆಗ್ರಹಿಸಿದರಲ್ಲದೆ ಬದುಕಿದ್ದವರನ್ನು ಸತ್ತಿದ್ದಾರೆಂದು ದಾಖಲಿಸಿ ಬಡ ಮಹಿಳೆಯ ಸಂಕಷ್ಠಕ್ಕೆ ಕಾರಣಕರ್ತನಾದ ಅಧಿಕಾರಿಯ ವಿರುದ್ದ ಕ್ರಮ ಜರುಗಿಸುವಂತೆ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರನ್ನು ಒತ್ತಾಯಿಸಿದರು. ಬಡ ಮಹಿಳೆಗೆ ಆಗಿರುವ ಅನ್ಯಾಯದ ಬಗ್ಗೆ ತಹಸೀಲ್ದಾರರ ಮುಂದೆ ಕಿಡಿಕಾರಿದ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ತಾಲೂಕಿನ ಉದ್ದಗಲಕ್ಕೂ ಗ್ರಾಮ ಆಡಳಿತ ಅಧಿಕಾರಿಗಳು ಜನರ ಸುಲಿಗೆಯಲ್ಲಿ ನಿಂತಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ವರದಿ ತಯಾರಿಸುವ ಬದಲು ಕುಳಿತ ಜಾಗದಿಂದಲೇ ತಪ್ಪು ತಪ್ಪು ವರದಿಗಳನ್ನು ತಯಾರಿಸುತ್ತಾ ಸಾರ್ವಜನಿಕರು ನಿತ್ಯ ಕಛೇರಿಗಳಿಗೆ ಅಲೆಯುವ ಪರಿಸ್ಥಿತಿ ನಿರ್ಮಿಸಿದ್ದಾರೆ. ವಯೋವೃದ್ದೆ ಲಕ್ಷ್ಮಮ್ಮ ಅವರಿಗೆ ರದ್ದು ಮಾಡಿರುವ ಪಿಂಚಿಣಿ ಹಣವನ್ನು ಮರು ಜಾರಿಗೊಳಿಸಿದರೆ ಸಾಲದು, ಆಕೆಯ ಸಂಕಷ್ಠಕ್ಕೆ ಕಾರಣಕರ್ತನಾದ ಗ್ರಾಮ ಲೆಕ್ಕಾಧಿಕಾರಿಯ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೇವೆಯಿಂದಲೇ ವಜಾಗೊಳಿಸಬೇಕು. ಮರಣ ಪ್ರಮಾಣ ಪತ್ರವಿಲ್ಲದೆ ಯಾವ ಆಧಾರದ ಮೇಲೆ ಲಕ್ಷ್ಮಮ್ಮ ಅವರ ಪಿಂಚಿಣಿ ರದ್ದು ಮಾಡಲಾಯಿತು ಎನ್ನುವುದರ ಸಮಗ್ರ ತನಿಖೆಯಾಗಬೇಕು. ತಾಲೂಕು ವ್ಯಾಪ್ತಿಯಲ್ಲಿ ಇದೇ ರೀತಿಯ ಹಲವು ಪ್ರಕರಣಗಳು ರೈತಸಂಘದ ಗಮನಕ್ಕೆ ಬಂದಿದ್ದು ಬದುಕಿದ್ದವರನ್ನೂ ಸರ್ಕಾರಿ ದಾಖಲೆಗಳಲ್ಲಿ ಸಾಯಿಸಿ ಶ್ರೀ ಸಾಮಾನ್ಯರಿಗೆ ಕಿರುಕುಳ ನೀಡುವುದನ್ನು ರೈತಸಂಘ ಸಹಿಸುವುದಿಲ್ಲ. ಕಂದಾಯ ಇಲಾಖೆಯ ಕಾರ್ಯವೈಕರಿಯನ್ನು ವಿರೋಧಿಸಿ ಹಾಗೂ ಲಕ್ಷ್ಮಮ್ಮ ಅವರ ಪ್ರಕರಣದಲ್ಲಿ ತಪ್ಪು ಮಾಡಿರುವ ಗ್ರಾಮ ಆಡಳಿತ ಅಧಿಕಾರಿ ತಿಪ್ಪೇಶ್ ಅವರನ್ನು ತನಿಖೆಗೆ ಒಳಪಡಿಸಿ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕು ರೈತಸಂಘ ಜೂನ್ 10 ರ ಸೋಮುವಾರ ತಾಲೂಕು ಆಡಳಿತ ಸೌಧದ ಮುಂದೆ ಧರಣಿ ಸತ್ಯಾಗ್ರಹ ನಡೆಸಲಿದೆ ಎಂದು ಪುಟ್ಟೇಗೌಡ ತಿಳಿಸಿದರು.