ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಅಗತ್ಯ
ಸಿರಾ, ಮೇ ೩೧- ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಹತ್ತರವಾದ ಬದಲಾವಣೆ ಆಗಬೇಕು ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿ. ಬಿ. ಜಯಚಂದ್ರ ಹೇಳಿದರು.
ನಗರದಲ್ಲಿನ ತಮ್ಮ ಸ್ವಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಎಂಬುದು ಬಡ ಮಕ್ಕಳಿಗೆ ಎಟಕದಂತಾಗಿದೆ. ರಾಜ್ಯದಲ್ಲಿ ೨೩ ಸಾವಿರ ಅನುದಾನಿತ ಶಾಲೆಗಳು, ೪೪ ಸಾವಿರ ಖಾಸಗಿ ಶಾಲೆಗಳ ನಡುವೆ ಸರ್ಕಾರಿ ಶಾಲೆಗಳು ಪೈಪೋಟಿ ನಡೆಸುತ್ತಿವೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ೫ ರಿಂದ ೧೦ ಮಕ್ಕಳಿದ್ದು, ಇಲ್ಲಿ ಶಿಕ್ಷಕರ ಕೊರತೆಯು ಸಹ ಇದೆ. ಅವುಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸರ್ಕಾರಿ ಶಾಲೆಗಳನ್ನು ಉನ್ನತಿಕರಣಗೊಳಿಸುವ ಕೆಲಸವನ್ನು ಸರ್ಕಾರ ಕೈಗೊಂಡಿದೆ. ಅದಕ್ಕಾಗಿ ಸ್ವಪಕ್ಷದ ಸದಸ್ಯರ ಆಯ್ಕೆ ಬಹಳ ಮುಖ್ಯವಾಗಿದ್ದು ಆಡಳಿತ ಪಕ್ಷಕ್ಕೆ ವಿರೋಧ ಪಕ್ಷಗಳ ಸಹಕಾರ ಅತ್ಯಗತ್ಯ. ಆದರೆ ಇದು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದಿ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ರವರನ್ನು ಗೆಲ್ಲಿಸುವುದರ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲ್ಯಾಗ್ರ ಬದಲಾವಣೆ ತರುವ ಮೂಲಕ ಶಿಕ್ಷಣ ಎಂಬುದು ನಮ್ಮ ಮಕ್ಕಳ ಮನೆ ಬಾಗಿಲಿಗೆ ಬರುವಂತಾಗಬೇಕು ಎಂದು ತಿಳಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಮಾತನಾಡಿ, ಪ್ರಸ್ತುತ ಶಿಕ್ಷಕರು ಬದಲಾವಣೆ ಬಯಸಿದ್ದಾರೆ. ಶಿಕ್ಷಣ ಮತ್ತು ಶಿಕ್ಷಕ ೧೦ ಹಲವಾರು ಸಮಸ್ಯೆಗಳಿದ್ದು ಅವುಗಳನ್ನು ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಆಗಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಸೊರಗುತ್ತಿರುವ ಶಾಲೆಗಳನ್ನು ಕಾಪಾಡಬೇಕು ಎಂದರು.
ಈ ಸಂದರ್ಭದಲ್ಲಿ ಮಂಜುನಾಥ್, ನಾಗರಾಜು ನಗರಸಭೆ ನಾಮ ನಿರ್ದೇಶಕ ಸದಸ್ಯ ಮಹೇಶ್, ಧ್ರುವಕುಮಾರ್ ಉಪಸ್ಥಿತರಿದ್ದರು.