ಬಸವಾದಿಶರಣರ ವಚನ, ತತ್ವಗಳು ಇಂದಿಗೂ ಪ್ರಸ್ತುತ: ಮರಿಯಾಲಶ್ರೀ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಮೇ. 31-12ನೇ ಶತಮಾನದಲ್ಲಿ ಬಸವಾಧಿ ಶರಣರು ಸ್ಥಾಪನೆ ಮಾಡಿದ ಲಿಂಗಾಯತ ಧರ್ಮ ಹಾಗೂ ಅªರುಗಳು ರಚನೆ ಮಾಡಿದ ವಚನಗಳು, ತತ್ವ ಅದರ್ಶಗಳು ಇಂದಿಗೂ ಸಹ ಹೆಚ್ಚು ಪ್ರಸ್ತುತವಾಗಿದೆ ಎಂದು ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ತಿಳಿಸಿದರು.
ತಾಲೂಕಿನ ಗಡಿ ಗ್ರಾಮ ಬಂದಿಗೌಡನಹಳ್ಳಿಯಲ್ಲಿ ನಡೆದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರರ ಭಾವಚಿತ್ರ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂದು ಬಸವಣ್ಣ ಹಾಗೂ ಶರಣರು ರಚನೆ ಮಾಡಿದ ವಚನ ಸಾಹಿತ್ಯಗಳು ಜನರಲ್ಲಿ ಹೆಚ್ಚು ಅಕರ್ಷಣೆ ಮಾಡಿತ್ತು. ನುಡಿದಂತೆ ನಡೆಯುವ ಜೊತೆಗೆ ತಮ್ಮ ಜೀವನದ ಅನುಭವನ್ನು ವಚನ ಸಾಹಿತ್ಯದಲ್ಲಿ ದಾಖಲು ಮಾಡಿದರು. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಹ ಧರ್ಮವನ್ನು ಬಸವಣ್ಣ ಪ್ರತಿಪಾದಿಸಿದರು. ಅವರು ಸ್ಥಾಪನೆ ಮಾಡಿದ ಧರ್ಮ ವಿಶ್ವ ವ್ಯಾಪಿಯಾಗಿದೆ. ಇಂಥ ಶ್ರೇಷ್ಠವಾದ ಧರ್ಮದಲ್ಲಿ ನಾವೆಲ್ಲರು ಹುಟ್ಟಿದ್ದೇವೆ ಎಂಬುವುದೇ ಹೆಮ್ಮೆ ಎಂದು ಬಣ್ಣಿಸಿದರು.
ಶ್ರೀ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಿಸಿ ಮಾತನಾಡಿದ ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ, ಬಸವಣ್ಣ ಅವರು ಸರ್ವಕಾಲಕ್ಕೂ ಸಲ್ಲುವಂತಹ ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದರು. ಮೌಢ್ಯ, ಕಂದಾಚಾರ ಹಾಗೂ ಭಗವಂತನ ಸ್ವರೂಪವಾದ ಲಿಂಗ ಪೂಜೆಯಿಂದ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟರು. ಭಕ್ತಿ ಮಾರ್ಗದಲ್ಲಿ ನಡೆದು ನಮ್ಮೆಲ್ಲರಿಗು ವಿಶ್ವಗುರುವಾದರು ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ಮಾತನಾಡಿ, ಬಸವಣ್ಣ ಸಮ ಸಮಾಜ ನಿರ್ಮಾಣದ ಕನಸು ಕಂಡು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದರು. ಅದರೊಟ್ಟಿಗೆ ಸಮಾಜದಲ್ಲಿದ್ದ ಮೇಲು, ಕೀಳು, ಮೌಢ್ಯ ಹಾಗೂ ಕಂದಚಾರಗಳ ವಿರುದ್ದ ಧ್ವನಿವೆತ್ತಿದ್ದರು. ವಚನ ಸಾಹಿತ್ಯದ ಮೂಲಕ ಧರ್ಮವನ್ನು ಉಳಿಸಲು ಮುಂದಾದರು. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಉತ್ತಮ ಸಮಾಜವನ್ನು ನಿರ್ಮಾಣ ಮಾಡಲು ಶ್ರಮಿಸಿದ ಮಹಾಪುರುಷರು. ಅವರ ಜಯಂತಿಯನ್ನು ಆಚರಣೆ ಮಾಡುವ ಜೊತೆಗೆ ಅವರ ತತ್ವ ಅದರ್ಶಗಳನ್ನು ಯುವ ಪೀಳಿಗೆ ರೂಡಿಸಿಕೊಳ್ಳಬೇಕು ಎಂದರು.
ಭವ್ಯ ಮೆರವಣಿಗೆ: ಸರ್ವ ಅಲಂಕೃತಗೊಂಡ ಬಸವೇಶ್ವರರ ಭಾವಚಿತ್ರ ಮೆರವಣಿಗೆಯು ಮಂಗಳವಾಧ್ಯ, ವೀರಗಾಸೆ, ನಂದಿಧ್ವಜ, ಹುಲಿವಾಹನ ಹಾಗೂ ಬಸವಗಳ ಮೆರವಣಿಗೆಯೊಂದಿಗೆ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.
ಈ ಸಂದರ್ಭದಲ್ಲಿ ಬಸವ ಬಳಗದ ಬಸವಣ್ಣ, ಸೋಮಶೇಖರ್, ಗ್ರಾ.ಪಂ. ಸದಸ್ಯ ಚಂದ್ರು, ಸೋಮು, ಮಾಜಿ ಸದಸ್ಯ ಬಾಬು, ಬಸವಣ್ಣ, ಉಮೇಶ್, ಕುಮಾರ್, ಎಂ.ಸಿ. ಬಸವಣ್ಣ, ಮಹದೇವಪ್ಪ ಸೇರಿದಂತೆ ಗ್ರಾಮದ ಯುವಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.