ರಾಗಿ, ತೊಗರಿ ಅಂತರಬೆಳೆ-ರೈತರಿಗೆ ಲಾಭದ ಬೆಳೆ
ಹುಳಿಯಾರು, ಮೇ ೩೧- ರೈತರ ಹೊಲಗಳಿಗೆ ಭೇಟಿ ಮಾಡಿ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ, ಅಲಸಂದೆ, ರಾಗಿ, ತಳಿಗಳ ಸಮರ್ಪಕ ದಾಸ್ತಾನಿದ್ದು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬೇಕು ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಶಿವರಾಜ್‌ಕುಮಾರ್ ಹೆಚ್.ಎಸ್.ತಿಳಿಸಿದರು.
ರಾಗಿಯ ಉತ್ಪಾದನಾ ತಾಂತ್ರಿಕತೆಗಳನ್ನು ವಿವರಿಸಿದ ಅವರು, ಬಿತ್ತನೆಗೆ ೩-೪ ವಾರಗಳ ಮುಂಚೆ ಎಕೆರೆಗೆ ೩ ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿನಲ್ಲಿ ಸೇರಿಸುವುದು. ಶಿಫಾರಸ್ಸು ಮಾಡಿದ ಬಿತ್ತನೆ ಬೀಜವನ್ನು ೧೩ ಗ್ರಾಂ./ಎ. ಸತುವಿನ ಸಲ್ವೇಟ್‌ನೊಂದಿಗೆ ಉಪಚಾರ ಮಾಡುವುದು. ಪ್ರತಿ ಕಿ.ಗ್ರಾಂ.ಬಿತ್ತನೆ ಬೀಜಕ್ಕೆ ೨ ಗ್ರಾಂ ಕಾರ್ಬನ್ ಡೈಜಿಂ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದು. ಒಂದು ಎಕರೆ ಪ್ರದೇಶಕ್ಕೆ ೫ ಕಿ.ಗ್ರಾಂ. ಶಿಫಾರಸ್ಸು ಮಾಡಿದ ಬಿತ್ತನೆ ಬೀಜನ್ನು ಸಾಲಿನಿಂದ ಸಾಲಿನ ೧೨ ಅಂಗುಲ ಅಂತರದಲ್ಲಿ ಸಂಯುಕ್ತ ಕೂರಿಗೆಯನ್ನು ಉಪಯೋಗಿಸಿ ಬಿತ್ತುವುದು ಲಾಭದಾಯಕ ಎಂದು ವಿವರಿಸಿದರು.
ಕಳೆ ಹತೋಟಿಗೆ ಬಿತ್ತಿದ ಅಥವಾ ಮಾರನೇ ದಿವಸ ಎಕರೆಗೆ ೩೦೦ ಗ್ರಾಂ, ಐಸೋಪ್ರೋಟುರಾನ್ ಶೇ.೭೫ ರ ಪುಡಿಯನ್ನು ೩೦೦ ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡುವುದು. ಬಿತ್ತನೆಯಾದ ೧೫ ದಿನಗಳ ನಂತರ ಪೈರಿನಿಂದ ಪೈರಿಗೆ ೪ ಅಂಗುಲ ಕಾಪಾಡಿಕೊಂಡು ತೆಳುವು ಮಾಡುವುದು. ಹೆಚ್ಚು ಮಳೆ ಹಾಗೂ ಸಮಾನಾಂತರವಾಗಿ ಹಂಚಿಕೆಯಾಗುವ ಪ್ರದೇಶಗಳಲ್ಲಿ ನಾಟಿ ಮಾಡಿವುದಾದಲ್ಲಿ ೧ ಅಡಿ ಅಂತರದ ಸಾಲುಗಳಲ್ಲಿ ಪೈರಿನಿಂದ ಪೈರಿಗೆ ೪ ಅಂಗುಲ ಅಂತರದಲ್ಲಿ ಪ್ರತಿ ಗುಣಿಗೆ ೨-೩ ಪೈರುಗಳನ್ನು ನಾಟಿ ಮಾಡಬೇಕು ಎಂದು ತಿಳಿಸಿದರು.
ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ರಸಗೊಬ್ಬರಗಳಾದ ಸಾರಜನಕ ೧೦ ಕಿ.ಗ್ರಾಂ. ರಂಜಕ ೧೫ ಕಿ.ಗ್ರಾಂ ಹಾಗೂ ಪೋಟ್ಯಾಷ್ ೧೬ ಕಿ.ಗ್ರಾಂ ಈ ಮೂರು ರಸಗೊಬ್ಬರಗಳನ್ನು ಬಿತ್ತನೆ ಸಮಯದಲ್ಲಿ ಕೊಡುವುದು. ಎಕರೆಗೆ ಲಘು ಪೋಷಕಾಂಶಗಳಾದ ೫ ಕಿ.ಗ್ರಾಂ. ಸತುವಿನ ಸಲೈಟ್ ಮತ್ತು ೪ ಕಿ.ಗ್ರಾಂ. ಬೋರಾಕ್ಸನ್ನು ಬಿತ್ತನೆಗೆ ಮುಂಚೆ ಕೊಡುವುದು. ಬಿತ್ತನೆ ಮಾಡಿದ ೧೫ ದಿನಕ್ಕೆ ೨-೩ ಬಾರಿ ೧೦ ದಿನಗಳ ಅಂತರದಲ್ಲಿ ಅಂತರ ಬೇಸಾಯ ಮಾಡುವುದು. ಬಿತ್ತನೆ ಮಾಡಿದ ೬-೭ ವಾರಗಳ ನಂತರ ೧೦ ಕಿ.ಫ್ರಾಂ. ಸಾರಜನಕ ಒದಗಿಸುವ ರಸಾಯನಿಕ ಗೊಬ್ಬರಗಳನ್ನು ಮೇಲುಗೊಬ್ಬರವಾಗಿ ಕೊಡುವುದು. ರಾಗಿ ಮತ್ತು ತೂಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವುದು (೮ ಸಾಲು ರಾಗಿ : ೨ ಸಾಲು ತೂಗರಿ) ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ ಮತ್ತು ಉತ್ತಮ ಇಳುವರಿಯು ದೊರೆಯುತ್ತದೆ ಎಂಬ ಮಾಹಿತಿ ನೀಡಿದರು.
ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ-೧೦.೮, ಅಲಸಂದೆ-೧೨.೧೫, ರಾಗಿ-೫೬.೯೦ ದಾಸ್ತಾನಿದ್ದು, ತಾಲ್ಲೂಕಿನಲ್ಲಿ ರಸಗೂಬ್ಬರ ಮಳಿಗೆಯಲ್ಲಿ ಹಾಗೂ ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ ಪ್ರಸ್ತಕ ಹಂಗಾಮಿಗೆ ರಸಗೊಬ್ಬರದ ದಾಸ್ತಾನಿದ್ದು ಯಾವುದೇ ಕೊರತೆಯಿರುವುದಿಲ್ಲ ಮತ್ತು ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳನ್ನು ಭೇಟಿ ಮಾಡಿ ಇಲಾಖೆಯ ಸೌಲಭ್ಯ ಪಡೆಯಬೇಕೆಂದು ಎಂದು ತಿಳಿಸಿದರು.