ಸಿಡಿದ ಕಲ್ಲು ಅಧಿಕಾರಿಗಳು ತಬ್ಬಿಬ್ಬು
ಕೋಲಾರ ,ಮೇ,೩೧:ಗಣಿಗಾರಿಕೆಯಲ್ಲಿ ಕಾನೂನು ಬಾಹಿರವಾಗಿ ಬ್ಲಾಸಿಂಗ್ ನಡೆಸಿ ಅಕ್ರಮವೆಸಗಿದ್ದಾರೆಂಬ ಆರೋಪದ ಹಿನ್ನಲೆ ಸಾರ್ವಜನಿಕರ ದೂರಿನ ಮೇರೆಗೆ ಸ್ಥಳ ಪರಿಶೀಲನೆ ವೇಳೆ ನಡೆಸಿದ ಟ್ರಯಲ್ ಬ್ಲಾಸ್ಟ್ ನಲ್ಲಿ ಸಿಡಿದ ಕಲ್ಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆಯೇ ಬೀಳುವ ಹಂತಕ್ಕೆ ತಲುಪಿ ಅಧಿಕಾರಿಗಳು ತಬ್ಬಿಬ್ಬಾದ ಘಟನೆ ಕೋಲಾರ ತಾಲ್ಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಕೆ.ಬಿ.ಹೊಸಹಳ್ಳಿ ಗ್ರಾಮ ಸಮೀಪದ ಬೆಟ್ಟಗಳನ್ನು ಬೈಯಣ್ಣ, ಅಬ್ದುಲ್ ರೆಹಮಾನ್ (ಮುಜೀಬ್), ನಂದೀಶ್ ರೆಡ್ಡಿ ಮತ್ತು ಜಯರಾಂರೆಡ್ಡಿ ಎಂಬುವವರು ಲೀಸ್ ಪಡೆದು ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೆ ಸ್ಥಳೀಯರು ಗಣಿಗಾರಿಕೆಯನ್ನು ನಿಯಮ ಬಾಹಿರವಾಗಿ ನಡೆಸಿ ಅಕ್ರಮವಾಗಿ ಬ್ಲಾಸ್ಟಿಂಗ್ ಹಾಗೂ ಹೆಚ್ಚುವರಿ ತೂಕದಲ್ಲಿ ಕಲ್ಲುಗಳನ್ನು ಸಾಗಿಸುತ್ತಿದ್ದಾರೆಂದು ಆರೋಪಿಸಿ ಸ್ಥಳೀಯರು ದೂರು ನೀಡಿದ್ದರು. ಅಲ್ಲದೆ ಇತ್ತೀಚೆಗೆ ಬ್ಲಾಸ್ಟಿಂಗ್ ನಿಂದ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾ. ಈ ಸಂಬಂಧ ಸ್ಥಳಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸಿದರು.
ಬ್ಲಾಸ್ಟಿಂಗ್ ಸಂದರ್ಭದಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಬಾಹಿರವಾಗಿ ಬ್ಲಾಸಿಂಗ್ ನಡೆಸಿದ ಕಾರಣ ಅಲ್ಲಿನ ಕಲ್ಲುಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಬೀಳುವ ಹಂತಕ್ಕೆ ತಲುಪಿದಾಗ ಅಧಿಕಾರಿಗಳು ಸ್ಥಳದಿಂದ ಓಡಿಹೋದರು. ಇದರಿಂದ ಸ್ಥಳೀಯರು ಸಹ ಸಾಕಷ್ಟು ಆತಂಕಕ್ಕೀಡಾಗಿ ನಂತರ ಅಧಿಕಾರಿಗಳು ಬ್ಲಾಸ್ಟಿಂಗ್ ನಡೆಸಿದ ಹಾಗೂ ಗಣಿ ಲೀಸ್ ಪಡೆದ ಮಾಲೀಕರ ವಿರುದ್ಧ ಕೆಲ ಕಾಲ ವಾಗ್ದಾಳಿ ನಡೆಸಿದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ರಾಜೇಶ್ ಮತ್ತು ಸಹಾಯಕಾಧಿಕಾರಿ ಚೊಕ್ಕಾರೆಡ್ಡಿ ಸ್ಥಳೀಯರ ದೂರು ಹಾಗೂ ಬ್ಲಾಸ್ಟಿಂಗ್ ಸ್ಥಳದಿಂದ ಕಲ್ಲು ಸಿಡಿದು ಪಕ್ಕದ ಜಮೀನುಗಳ ಮೇಲೆ ಬೀಳುವುದು ಹಾಗೂ ತಮ್ಮ ಮೇಲೆ ಬಿದ್ದ ಕಲ್ಲಿನ ಅಳತೆಯನ್ನು ಮಾಡಿದರು. ಬ್ಲಾಸ್ಟಿಂಗ್ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ರಬಸ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸ್ಥಳೀಯರಾದ ವಕೀಲ ನಾಗರಾಜ್ ಮಾತನಾಡಿ ಕಳೆದ ಮೂರು ವರ್ಷಗಳಿಂದ ನಮಗೆ ಇದೇ ಸಮಸ್ಯೆ ಇದೆ. ಬ್ಲಾಸ್ಟಿಂಗ್ ಸಧ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮಾಡಿದರು ಪರಿಶೀಲನೆಗೆ ಬಂದ ಅಧಿಕಾರಿಗಳ ಮೇಲೆಯೇ ಬೀಳುವ ಹಂತಕ್ಕೆ ತಲುಪಿತ್ತು. ಸ್ಥಳೀಯರು ಪ್ರತಿ ನಿತ್ಯ ಇದೇ ಸಮಸ್ಯೆಯಿಂದ ತೊಂದರೆಗೆ ಒಳಗಾಗುತ್ತಿದ್ದು, ಸಾಕಷ್ಟು ಮಂದಿ ಗಾಯಗೊಂಡಿದ್ದು ಇತ್ತೀಚೆಗೆ ಓರ್ವವ್ಯಕ್ತಿ ಮೃತ ಪಟ್ಟಿದ್ದ, ಕೂಡಲೇ ಇದನ್ನು ರದ್ದುಗೊಳಿಸಬೇಕು. ಗಣಿಗಾರಿಕೆಯ ಮಾಲೀಕರು ಎಲ್ಲವನ್ನೂ ಕಾನೂನು ಬಾಹಿರವಾಗಿಯೇ ಮಾಡುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಮೌನ ವಹಿಸಿದ್ದಾರೆಂದು ಆರೋಪಿಸಿದರು.
ಗಣಿಗಾರಿಕೆ ಪಕ್ಕದ ಜಮೀನಿನ ರೈತ ಅಶೋಕ್ ರೆಡ್ಡಿ ಮಾತನಾಡಿ ಅಧಿಕಾರಿಗಳು ಬಂದಿರುವುದರಿಂದ ಅಲ್ಪಪ್ರಮಾಣದಲ್ಲಿ ಬ್ಲಾಸ್ಟಿಂಗ್ ಮಾಡಿದ್ದಾರೆ. ನಾವು ಪ್ರತಿನಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾದ ರೀತಿಯಲ್ಲಿ ನಮ್ಮ ಜಮೀನಿನ ಮೇಲೆ ಕಲ್ಲುಗಳು ಬೀಳುತ್ತದೆ. ಜಮೀನಿನಲ್ಲಿ ಬೆಳೆದ ಬೆಳೆಯೂ ಹಾನಿಯಾಗಿ ಸಾಕಷ್ಟು ತೊಂದರೆಯಾಗಿದ್ದು, ರಾಸುಗಳನ್ನು ಸಹ ಕಟ್ಟಿಹಾಕಲು ಆಗುತ್ತಿಲ್ಲ. ಅಧಿಕಾರಿಗಳು ಬೇಟಿ ನೀಡಿ ವರದಿ ನೀಡುತ್ತೇವೆ ಎಂದಿದ್ದಾರೆ ಆದರೆ ನಮಗೆ ಏನಾದರೂ ತೊಂದರೆ ಆದರೆ ಅದಕ್ಕೆ ಅಧಿಕಾರಿಗಳೇ ನೇರಹೊಣೆ, ಆದ್ದರಿಂದ ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳಿಯರಾದ ಶ್ರೀರಾಮ್, ಶ್ರೀನಿವಾಸ್, ಮುರಳಿ, ಅನಿಲ್, ಅಬ್ಬಣ್ಣ, ನಾಗರಾಜ್, ರಾಮಕೃಷ್ಣಪ್ಪ, ಮಂಜುನಾಥಗೌಡ, ವಿಜಯಕುಮಾರ್ ಸೇರಿದಂತೆ ಇತರರು ಇದ್ದರು, ಹಾಗೂ ವೇಮಗಲ್ ಪೊಲೀಸ್ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.