ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿ: ವ್ಯವಸ್ಥಿತ ಮತ ಎಣಿಕೆಗೆ
ಕೋಲಾರ,ಮೇ೩೧-ಮತ ಎಣಿಕೆಗೆ ನಿಗಧಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು.
ಇಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ – ೨೦೨೪ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಮತ ಎಣಿಕೆ ಜೂನ್ ೪ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ ೮ ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕೆಂದರು.
ಅಂದು ಬೆಳಗ್ಗೆ ೬ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಪಹಾರ ಮುಗಿಸಿ ೭ ಗಂಟೆಯೊಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು ಹಾಗೂ ಮತ ಎಣಿಕೆ ಕೊಠಡಿಯೊಳಗಡೆ ಮೊಬೈಲ್ ನ್ನು ನಿಷಧಿಸಲಾಗಿದೆ. ಮತ ಎಣಿಕೆ ಕೊಠಡಿಯೊಳಗಡೆ ಪೊಲೀಸ್, ಸೆಕ್ಯುರಿಟಿ ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ಪ್ರವೇಶವಿರುವುದಿಲ್ಲ. ಅಭ್ಯರ್ಥಿಗಳಲ್ಲದೆ ಸಚಿವರು, ರಾಜ್ಯ ಸಚಿವರು, ಕೇಂದ್ರ ಸಚಿವರಿಗೆ ಮತ ಎಣಿಕೆ ಕೊಠಡಿಯೊಳಗಡೆ ಪ್ರವೇಶ ಇರುವುದಿಲ್ಲ ಎಂಬ ಮಾಹಿತಿ ತಿಳಿದಿರಲಿ ಎಂದು ಹೇಳಿದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ವಿವಿಪ್ಯಾಟ್ ಆನ್ ಮಾಡುವುದು, ರಿಸಲ್ಟ್ ಬಟನ್ ಪ್ರೆಸ್ ಮಾಡುವುದು ಹಾಗೂ ಅದನ್ನು ಕ್ಲೋಸ್ ಮಾಡುವಾಗ ಬಹು ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ನಿಯೋಜನೆಗೊಂಡ ಏಜೆಂಟ್‌ರ ಬಳಿ ಶಾಂತವಾಗಿ ವರ್ತಿಸಿ, ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಿರಿ. ಪ್ರತಿ ಇವಿಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಇಂದಿನ ತರಬೇತಿ ಅವಧಿಯಲ್ಲಿ ಸ್ಪಷವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಿ, ಏಕೆಂದರೆ ಮತ ಎಣಿಕೆ ಮೇಲ್ವೀಚಾರಕರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ನಾರಾಯಣ ಅವರು ಮಾತನಾಡಿ, ಅಂಚೆ ಮತಪತ್ರ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ಹಾಗೂ ೪ ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸರ್ವೀಸ್ ವೋಟ್‌ಗಳನ್ನು (ಇ.ಟಿ.ಪಿ.ಬಿ.ಎಸ್) ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತಂತ್ರಾಂಶದಲ್ಲಿ ಮತ ಎಣಿಕೆ ಮಾಡಲಾಗುವುದು. ವಿಧಾನಸಭೆ ಕ್ಷೇತ್ರವಾರು ಐದು ಮತಗಟ್ಟೆಗಳ ವಿ.ವಿ. ಪ್ಯಾಟ್‌ಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಅಭ್ಯರ್ಥಿಗಳ, ಏಜೆಂಟರ ಸಮಕ್ಷಮದಲ್ಲಿ ವಿ.ವಿ.ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುವುದು. ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಹನಗಳನ್ನು ನಿಗಧಿತ ನಿಲುಗಡೆ ತಾಣಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು. ಸಾಕಷ್ಟು ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಾಣಿಕ್ಯಳ್ ಅವರು ಮಾತನಾಡಿ, ಸರ್ವೀಸ್ ವೋಟ್‌ಗಳನ್ನು ಕ್ರಮಬದ್ಧವಾಗಿ ಇದ್ದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ಸ್ವಘೋಷಿತ ಪ್ರಮಾಣ ಪತ್ರದಲ್ಲಿ ಮತದಾರರ ಹಾಗೂ ಪತ್ರಾಂಕಿತ ಅಧಿಕಾರಿ ಸಹಿಯಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ತಮ್ಮ ಜವಬ್ದಾರಿಗಳನ್ನು ನಿರ್ವಹಿಸಬೇಕು. ಬುದ್ದಿವಂತಿಕೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಗೆ ಕೀರ್ತಿ ಪ್ರತಿಷ್ಠೆ ತರಬೇಕು ಎಂದರು.
ಮಾಸ್ಟರ್ ಟ್ರೇನರ್ ಬೋಡಿರೆಡ್ಡಿ ಅವರು, ತರಬೇತಿಗೆ ಆಗಮಿಸಿದ ಸಿಬ್ಬಂದಿಗಳಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಧಿಕಾರಿ ವೆಂಕಟಲಕ್ಷ್ಮಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಎಲ್ಲಾ ಎ.ಆರ್.ಓ, ಎಲ್ಲಾ ತಹಸೀಲ್ದಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.