ಬೆಳಗಿನ ವೇಳೆ ಸಂಭವಿಸುವ ಅಗ್ನಿ ಅನಾಹುತ
ವಿಜಯಪುರ.ಮೇ೩೧:ಭಾರತ ದೇಶದಲ್ಲಿ ಗ್ಯಾಸ್ನಿಂದ ಸಂಭವಿಸುವ ಅತಿ ಹೆಚ್ಚು ಅಗ್ನಿ ಅನಾಹುತಗಳು ಸಾಮಾನ್ಯವಾಗಿ ಬೆಳಗಿನ ಜಾವದಲ್ಲಿಯೇ ಸಂಭವಿಸುತ್ತಿದ್ದು, ಕಾರಣ ರಾತ್ರಿ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್‌ಗಳ ಸಂಪರ್ಕಗಳನ್ನು ಆಫ್ ಮಾಡದಿರುವುದು ಎಂದು ಎಚ್.ಪಿ. ಸಂಗಮ ಗ್ಯಾಸ್ ಏಜೆನ್ಸಿಯ ಮಾಲೀಕರಾದ ಎಸ್ ನಟರಾಜ್ ರವರು ತಿಳಿಸಿದರು.
ಅವರು ಇಲ್ಲಿನ ಸರ್ಕಾರಿ ಮಾದರಿ ಹೆಣ್ಣು ಮಕ್ಕಳ ಪಾಠಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ಗಳಿಂದಾಗುವ ಅವಘಡಗಳ ಬಗೆಗಿನ ಜಾಗೃತಿ ಹಾಗೂ ಎಚ್ಚರಿಕೆ ಕ್ರಮಗಳ ಬಗ್ಗೆ ಮಕ್ಕಳಿಗೆ ಹಾಗೂ ಶಿಕ್ಷಕರುಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿ, ಮಾತನಾಡುತ್ತಿದ್ದರು.
ಪ್ರತಿಯೊಂದು ಮನೆಗಳಲ್ಲಿಯೂ ಬಳಕೆಯಲ್ಲಿರುವ ಗ್ಯಾಸ್ ಸಿಲಿಂಡರ್‌ಗಳ ಉಪಯೋಗ ಹಾಗೂ ತೊಂದರೆಗಳ ಬಗ್ಗೆ ಮಕ್ಕಳು ಬಾಲ್ಯದಿಂದಲೇ ತಿಳಿದುಕೊಳ್ಳಬೇಕಾಗಿದ್ದು, ಭಾರತ ದೇಶದಲ್ಲಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಅನಕ್ಷರಸ್ಥರು ಸಹ ಗ್ಯಾಸ್ ಸಿಲಿಂಡರ್‌ಗಳ ಸಂಪರ್ಕ ಪಡೆದುಕೊಂಡಿದ್ದು, ಅವುಗಳನ್ನು ಉಪಯೋಗಿಸುತ್ತಿರುವುದರಿಂದ ಸುಲಭವಾಗಿ ಗ್ಯಾಸ್ ಲೀಕೆಜ್ ಬಗ್ಗೆ ಅರ್ಥವಾಗಲಿ ಎಂದು, ಇನ್ನಿತರೆ ಯಾವುದೇ ದೇಶಗಳಲ್ಲಿ ಇಲ್ಲದಿರುವಂತಹ ಗ್ಯಾಸ್ ಅನಿಲಕ್ಕೆ ವಾಸನೆ ಬರುವಂತಹ ರಾಸಾಯನಿಕ ಭಾರತದಲ್ಲಿ ಮಾತ್ರ ಬೆರೆಸಿದ್ದು, ಎಂತಹ ಸಾಮಾನ್ಯ ಜ್ಞಾನ ಕಡಿಮೆ ಇರುವಂತಹವರಿಗೂ ಸಹ ಗ್ಯಾಸ್ ಲೀಕೇಜ್ ಬಗ್ಗೆ ಅರಿವು ಮೂಡಲಿ ಎಂದು ಮಾಡಿರುತ್ತಾರೆ ಎಂದು ತಿಳಿಸಿದರು.
ಅಡುಗೆ ಅನಿಲ ಭಾರವಾಗಿದ್ದು ಯಾವಾಗಲೂ ಗ್ಯಾಸ್ ಸ್ಟೌವನ್ನು ಅನಿಲ ಸಿಲಿಂಡರ್ ಗಳಿಗಿಂತ ಎತ್ತರದಲ್ಲಿ ಇಟ್ಟು ಅಡುಗೆ ಮಾಡಬೇಕೆಂದು, ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ ಬಳಸುವ ಜಾಗಗಳಲ್ಲಿ ಗಾಳಿ ಬೆಳಕು ಚೆನ್ನಾಗಿ ಆಡುವಂತಿದ್ದು ವಿಶಾಲವಾಗಿರಬೇಕು. ಮನೆಗಳಲ್ಲಿ ಗ್ಯಾಸ್ ಲೀಕೇಜ್ ನಿಂದ ವಾಸನೆ ಬಂದ ಕೂಡಲೇ ಯಾವುದೇ ವಿದ್ಯುತ್ ದೀಪಗಳನ್ನು ಹಾಗೂ ಬೆಂಕಿಕಡ್ಡಿ ಹಚ್ಚದೆ ಕಿಟಕಿ ಬಾಗಿಲುಗಳನ್ನು ತೆರೆದು, ಗ್ಯಾಸ್ ಅನಿಲ ಗಾಳಿಯಲ್ಲಿ ಬೆರೆತು ಹೋಗುವಂತೆ ಹಾಗೂ ಸಿಲಿಂಡರ್ ಸಂಪರ್ಕ ಕ್ಲೋಸ್ ಮಾಡುವಂತಹವರಾಗಬೇಕೆಂದು ತಿಳಿಸಿದರು.
ಯಾವುದೇ ಮನೆಗಳಲ್ಲಿ ಒಂದು ಸಿಲಿಂಡರ್ ಗೆ ಎರಡು ಸಂಪರ್ಕಗಳನ್ನು ನೀಡಬಾರದೆಂದು, ಹಾಗೂ ಗ್ಯಾಸ್ ಸ್ಟವ್ ಹಾಗೂ ಗ್ಯಾಸ್ ಸಿಲಿಂಡರ್ ಗೆ ಸಂಪರ್ಕ ಕಲ್ಪಿಸುವ ಪೈಪ್ಗಳ ಮೇಲೆ ಯಾವುದೇ ಹೊದಿಕೆ ಇರಬಾರದೆಂದು ಮನೆಗಳಲ್ಲಿ ಯಾರು ಸಹ ಗ್ಯಾಸ್ ಸಂಪರ್ಕದಿಂದ ಬಿಸಿನೀರು ಕಾಯಿಸುವ ಸ್ಟವ್ಗಳನ್ನು ಬಳಸಬಾರದೆಂದು ಎಚ್ಚರಿಕೆ ನೀಡಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಮನೋಹರ್ ರವರು ಮಾತನಾಡಿ, ಪ್ರತಿಯೊಬ್ಬರ ಮನೆಗಳಲ್ಲಿಯೂ ಬಳಕೆಯಲ್ಲಿರುವ ಗ್ಯಾಸ್ ಸಿಲಿಂಡರ್‌ಗಳ ಬಗ್ಗೆ ಸಂಗಮ್ ಗ್ಯಾಸ್ ಮಾಲೀಕರು ಅತ್ಯುತ್ತಮವಾದ ಸಂಗ್ರಹ ಪೂರ್ಣವಾದ ಮಾಹಿತಿ ನೀಡಿದ್ದು ಇವುಗಳನ್ನು ಆಲಿಸಿದ ಎಲ್ಲಾ ಶಾಲಾ ಮಕ್ಕಳು ಮನೆಗಳಲ್ಲಿ ತಮ್ಮ ಪೋಷಕರುಗಳಿಗೆ ಇಲ್ಲಿ ಅರಿತುಕೊಂಡ ವಿಷಯವನ್ನು ತಿಳಿಸಿ ಹೇಳುವ ಮೂಲಕ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಮ್ ಗ್ಯಾಸ್ ಏಜೆನ್ಸಿಯ ಸಿಬ್ಬಂದಿ ವರ್ಗದವರುಗಳಾದ ರೇಣುಕಾರಾದ್ಯ, ಹರೀಶ್, ಅಶೋಕ್, ಅಭಿಜಿತ್ ಹಾಗೂ ಶಿಕ್ಷಕ ವರ್ಗದ ವರ್ಗಗಳಾದ ನಿರ್ಮಲ, ದ್ರಾಕ್ಷಾಯಿಣಿ, ಸೀಮಾ, ಶೋಭಾ, ಆರ್ ರಾಜೇಶ್ವರಿ, ಸರಸ್ವತಿ, ರೋಹಿಣಿ, ಎಂ ರಾಜೇಶ್ವರಿ, ನಾಗರಾಜ್, ಮಮತಾ, ಮಾಧವಿ, ಅನ್ನಪೂರ್ಣೇಶ್ವರಿ ಹಾಗೂ ಬಿಸಿಯೂಟದ ಅಡುಗೆ ಸಿಬ್ಬಂದಿ ವರ್ಗದವರುಗಳು ಉಪಸ್ಥಿತರಿದ್ದರು.